`ಸ್ವಾತಂತ್ಯ್ರ ಹೋರಾಟದಲ್ಲಿ ಕರ್ನಾಟಕ ಉಳ್ಳಾಲ’ ಕೃತಿಯು ಬಿ.ವಿ. ವಸಂತಕುಮಾರ್ ಅವರ ಪ್ರಧಾನ ಸಂಪಾದಕತ್ವದಲ್ಲಿ, ಕೋಡಿಬೆಟ್ಟು ರಾಜಲಕ್ಷ್ಮೀ ಅವರ ಸಂಪಾದಕತ್ವದಲ್ಲಿ ಹಾಗೂ ಜ್ಯೋತಿ ಚೇಳ್ಯಾರು ಅವರ ರಚನೆಯಲ್ಲಿ ಮೂಡಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಬ್ರಿಟಿಷರು ಬರುವ ಮುನ್ನವೇ ಪೋರ್ಚುಗೀಸರು ವ್ಯಾಪಾರಕ್ಕಾಗಿ ಬಂದಿದ್ದರು. ಅವರ ವಿರುದ್ಧ ಹೋರಾಟಗಳು ನಡೆದಿದ್ದವು. ಅಬ್ಬಕ್ಕ ರಾಣಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಧೀರ ಮಹಿಳೆ, ಹಾಗಾಗಿ ಈ ಕೃತಿಯಲ್ಲಿ ಆಕೆಯ ಹೋರಾಟವನ್ನು ವಿವರಿಸಲಾಗಿದೆ. ಆ ಬಳಿಕ ಎರಡನೆಯ ಭಾಗದಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟಕ್ಕೆ ಉಳ್ಳಾಲ ನೀಡಿದ ಕೊಡುಗೆಯನ್ನು ಈ ಕೃತಿಯಲ್ಲಿ ಸಂಕ್ಷಿಪ್ತವಾಗಿ ಉಲ್ಲೇಖಿಸಲಾಗಿದೆ. ಅಬ್ಬಕ್ಕ ರಾಣಿಯ ಮಾಹಿತಿ ನೀಡುವ ಬೇರೆ ಬೇರೆ ಕೃತಿಗಳನ್ನು ಪರಾಮರ್ಶಿಸಿದಾಗ “ಉಳ್ಳಾಲದ ರಾಣಿ ಅಬ್ಬಕ್ಕಳ ಬಗ್ಗೆ ಒಂದಷ್ಟು ಗೊಂದಲಗಳು ಇರುವುದು ಸ್ಪಷ್ಟವಾಯಿತು. ಎಷ್ಟು ಮಂದಿ “ಅಬ್ಬಕ್ಕ” ರಿದ್ದರು ಎಂಬ ಪ್ರಶ್ನೆ ಮತ್ತು ಅವರ ಕಾಲದ ಪ್ರಶ್ನೆಗಳು ಬಹಳಷ್ಟು ಮುಖ್ಯವೆನಿಸಿತು. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಚರಿತ್ರಕಾರರು ಹೇಳಿರುವ ವಿಷಯಗಳನ್ನಷ್ಟೇ ಹೇಳುವ ಪ್ರಯತ್ನ ಇಲ್ಲಿಯದು. ಅಬ್ಬಕ್ಕಳ ಚರಿತ್ರೆ ಯಾಕೆ ಇಷ್ಟು ಗೊಂದಲಮಯ ಎಂಬುದರ ಜೊತೆಗೆ ತುಳುನಾಡಿನ ಸಾಮಾಜಿಕ ಸಾಂಸ್ಕೃತಿಕ ಅಂಶಗಳ ಬಗೆಗೆ ಸರಿಯಾದ ಗ್ರಹಿಕೆಯ ಸ್ಥಳೀಯ ಚರಿತ್ರಕಾರರು ಹಾಗೂ ವಿದೇಶೀಯರ ಉಲ್ಲೇಖದ ತಾಳೆಯೇ ಮುಖ್ಯ ಎನಿಸಿತು. ಈ ಹಿನ್ನೆಲೆಯಲ್ಲಿ ಇರುವ ಆಕರಗಳನ್ನು ಗ್ರಹಿಸಿಕೊಂಡು ವಿವರಿಸುವ ಪ್ರಯತ್ನ ಮಾಡಲಾಗಿದೆ.
©2024 Book Brahma Private Limited.