ಲೇಖಕರಾದ ಲಕ್ಷ್ಮಣ ಕೊಡಸೆ ಹಾಗೂ ವೀರಶೆಟ್ಟಿ ಬಿ ಗಾರಂಪಳ್ಳಿ ಅವರು ಸಂಪಾದಿಸಿರುವ ಕೃತಿ ಕನ್ನಡ ಅವಲೋಕನ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ತ್ರೈಮಾಸಿಕವಾಗಿ ಪ್ರಕಟಗೊಳ್ಳುವ `ಕನ್ನಡ ಜಾಗೃತಿ' ಹೆಸರಿನ ಪತ್ರಿಕೆ ಪ್ರಾಧಿಕಾರದ ಹಾಗೂ ಆಯಾ ಕಾಲದ ಅಧ್ಯಕ್ಷರ ಕಾರ್ಯವೈಖರಿ ಹಾಗೂ ಕೆಲಸಕಾರ್ಯಗಳಿಗೆ ಹಿಡಿಯುವ ಕೈಗನ್ನಡಿಯಾಗಿದೆ.ಏಕೆಂದರೆ ಪ್ರಾಧಿಕಾರ, ಕಾಲಕಾಲಕ್ಕೆ ಕೈಗೊಳ್ಳುವ ಮಹತ್ವದ ಕೆಲಸಗಳನ್ನು ಈ ಪತ್ರಿಕೆಯಲ್ಲಿ ದಾಖಲಿಸುವ ಮೂಲಕ ನಾಡಿನ ಜನಕ್ಕೆ ಹಾಗೂ ಮುಂಬರುವ ಅಧ್ಯಕ್ಷರುಗಳಿಗೆ ಉತ್ತರದಾಯಿಯಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಇದು ಪ್ರಾಧಿಕಾರದ ಚಟುವಟಿಕೆಗಳನ್ನು ದಾಖಲಿಸುವ ಮುಖಪತ್ರಿಕೆ. ಕನ್ನಡ-ಕನ್ನಡಿಗ-ಕರ್ನಾಟಕದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಹಾಗೂ ನಾಡು-ನುಡಿಗೆ ಸಂಬಂಧಿಸಿದ ಎಲ್ಲ ಬಗೆಯ ಗಂಭೀರ ಚರ್ಚೆಗಳಿಗೆ ಅವಕಾಶ ಒದಗಿಸುವ ವೇದಿಕೆ. ಇದರ ಸ್ವರೂಪ ಕಾಲಕಾಲಕ್ಕೆ ಕಾಲೋಚಿತವಾಗುತ್ತಿರುವುದು ಅದರ ಗುಣಾತ್ಮಕತೆಗೆ ಹಿಡಿದ ಕನ್ನಡಿಯಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ 14ನೇ ಅಧ್ಯಕ್ಷರಾಗಿ 2016ರ ನವೆಂಬರ್, 3ರಂದು ಅಧಿಕಾರ ವಹಿಸಿಕೊಂಡ ಪ್ರೊ.ಎಸ್.ಜಿ.ಸಿದ್ಧರಾಮಯ್ಯನವರ ನೇತೃತ್ವದಲ್ಲಿ ‘ಕನ್ನಡ ಜಾಗೃತಿ’ಯ ಒಟ್ಟು 10 ಸಂಚಿಕೆಗಳು ಬಂದಿವೆ. ಪ್ರಾಧಿಕಾರದ ಮುಖವಾಣಿಯಂತೆ ಬಂದಿರುವ ಪತ್ರಿಕೆಯ ಹತ್ತನೆಯ ಸಂಚಿಕೆಯಲ್ಲಿ ಪ್ರಾಧಿಕಾರದ ಆ ಅವಧಿಯ ಚಟುವಟಿಕೆಗಳನ್ನು ಗಮನಿಸುವುದು ಉಚಿತವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ಸಂವಿಧಾನಾತ್ಮಕ ಸಂಸ್ಥೆಯ ಅಧಿಕೃತತೆಯನ್ನು ಕಾಯ್ದೆಯಲ್ಲಿ ನೀಡಿರುವುದರಿಂದ ನಾಡು-ನುಡಿ ರಕ್ಷಣೆಗೆ ಸಂಬಂಧಿಸಿದ ಪ್ರಾಧಿಕಾರದ ಕ್ರಮಗಳು ಸರ್ಕಾರದ ಸಾಧನೆಗಳ ಪಟ್ಟಿಗೆ ಸೇರುತ್ತವೆ. ಸರ್ಕಾರದ ಆಡಳಿತ ಯಂತ್ರದ ಭಾಗವಾಗಿ ಪ್ರಾಧಿಕಾರ ಕನ್ನಡದ ಪಾರಮ್ಯವನ್ನು ರಕ್ಷಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿರುವುದನ್ನು ದಾಖಲಿಸಬೇಕು ಎಂಬ ಸದಾಶಯದಲ್ಲಿ ಈ ಹತ್ತೂ ಸಂಚಿಕೆಗಳು ಸಂವಾದಿಯಾಗಿ ಪ್ರಕಟಗೊಂಡಿವೆ. ಅವುಗಳ ಸಂಪಾದಕೀಯ ಬರೆಹಗಳು ನಾಡಿನ ಬಹುತೇಕ ಸಮಸ್ಯೆಗಳ ಬಗೆಗಿನ ಮೂಲವನ್ನು ಮತ್ತು ಅಗತ್ಯವಿರುವ ಪರಿಹಾರೋಪಾಯ ಸಾಧ್ಯತೆಗಳನ್ನು ದಾಖಲಿಸಿವೆ. ಅಲ್ಲದೆ, ಸಮಕಾಲೀನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಭಾಷಾ ನೀತಿಗಳನ್ನು ಹಾಗೂ ಭಾಷೆಯ ಬಗೆಗಿನ ಅವುಗಳ ನಿಲುವುಗಳನ್ನು ಪ್ರಕಟಪಡಿಸಿವೆ. ಇದು ಮುಂಬರುವ ಕನ್ನಡಪರ ಮನಸ್ಸುಗಳಿಗೆ ದಾರಿದೀವಿಗೆಯಾಗಲಿದೆ. ಹಾಗಾಗಿ ಅವುಗಳನ್ನು ಓದುಗರಿಗೆ ಒಂದೆಡೆ ಸಿಗಬಹುದಾದ ಅವಕಾಶಕ್ಕಾಗಿ ಈ ಪುಸ್ತಕದಲ್ಲಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅವರು ‘ಕನ್ನಡ ಜಾಗೃತಿ ಪತ್ರಿಕೆ’ಗೆ ಬರೆದ ‘ಸಂಪಾದಕೀಯಗಳನ್ನು ಯಥಾವತ್ತಾಗಿ ಸಂಗ್ರಹಿಸಲಾಗಿದೆ. ಅವುಗಳು ಭಾಷಾ ವಿಷಯದಲ್ಲಿ ಪ್ರಾಧಿಕಾರದ ನಿಲುವುಗಳನ್ನು ಗಟ್ಟಿಯಾಗಿ ಉಸುರುತ್ತವೆ ಎನ್ನುತ್ತಾರೆ ಸಂಪಾದಕರು.
©2024 Book Brahma Private Limited.