‘ಕೋಲಾರಜಿಲ್ಲೆಯ ಜಾತ್ರೆಗಳು-ಒಂದು ಅಧ್ಯಯನ’ ಎಂಬ ಹೆಸರಿನ ಈ ಮಹಾಪ್ರಬಂಧವು ಅವಿಭಜಿತ ಕೋಲಾರಜಿಲ್ಲೆಯ ಜಾತ್ರೆಗಳ ಸಮಗ್ರ ಅಧ್ಯಯನ ಮತ್ತು ಅವುಗಳಲ್ಲಿ ಅಡಗಿರುವ ಸಾಂಸ್ಕೃತಿಕ ಅಂಶಗಳ ಪರಿಚಯ ಹಾಗೂ ಜಾತ್ರೆಗಳಲ್ಲಿ ಕಂಡುಬರುವ ಭಿನ್ನತೆಗಳನ್ನು ಗುರಿಯಾಗಿಟ್ಟುಕೊಂಡು ನಡೆಸಿರುವ ಅಧ್ಯಯನವಾಗಿದೆ. ಜಿಲ್ಲೆಯಲ್ಲಿ ನಡೆಯುವ ಎಲ್ಲ ಬಗೆಯ ಜಾತ್ರೆಗಳನ್ನು ಒಂದು ಕಡೆ ಕಲೆಹಾಕಿ, ಅವು ಹುಟ್ಟಿಬಂದ ಬಗೆ, ಆಚರಣೆಗೊಳ್ಳುವ ರೀತಿ, ನಡೆದುಬಂದಿರುವ ದಾರಿ, ಆರಂಭದಲ್ಲಿ ಇದ್ದುದಕ್ಕೂ ಈಗಿರುವ ಸ್ಥಿತಿಗೂ ಇರುವ ವ್ಯತ್ಯಾಸ, ಜಾತ್ರೆಗಳಿಗೂ ಧರ್ಮಕ್ಕೂ ಇರುವ ಸಂಬಂಧ, ಜಾತ್ರೆಗಳಿಗೂ ಕಲೆಗೂ ಇರುವ ಸಂಬಂಧ, ಜಾತ್ರೆಗಳನ್ನು ಕುರಿತು ಇರುವ ಸಾಹಿತ್ಯ, ಜಾತ್ರೆಗಳ ಬಗ್ಗೆ ಅಲ್ಲಿನ ವಿಧಿಯಾಚರಣೆಗಳ ಬಗ್ಗೆ ಇರುವ ನಂಬಿಕೆ, ಸಮಾಜಕ್ಕೆ ಜಾತ್ರೆಗಳ ಅಗತ್ಯ, ಆಧುನಿಕ ಸಂದರ್ಭದಲ್ಲಿ ಜಾತ್ರೆಗಳು ಮತ್ತು ಅವುಗಳ ಪಾತ್ರ ಹಾಗೂ ಮುಂದಿನ ಪೀಳಿಗೆಗೆ ಉಳಿಯಬಹುದಾದ ಜಾತ್ರೆಗಳ ಬಗ್ಗೆ ಚಿಂತನೆ ನಡೆಸಿ ವಿಶ್ಲೇಷಿಸಲಾಗಿದೆ. ಈ ಮಹಾಪ್ರಬಂಧದ ವ್ಯಾಪ್ತಿಯು ಬಹಳ ವಿಸ್ತಾರವಾದುದರಿಂದ ಸಮಗ್ರತೆಯಲ್ಲಿ ಕೊರತೆ ಕಂಡುಬಂದಿರಬಹುದು. ಆದರೂ ಯಾವುದೇ ಜಾತ್ರೆ, ಅಲ್ಲಿನ ವಿಧಿವಿಧಾನಗಳು, ಆಚರಣೆಗಳು ನುಸುಳಿ ಹೋಗದಂತೆ ಎಚ್ಚರ ವಹಿಸಲಾಗಿದೆ. ಶಿಷ್ಟಜಾತ್ರೆಗಳನ್ನು ಕುರಿತು ಪರಿಚಯಿಸುವಾಗ ಉತ್ಸವಗಳ ಏಕತಾನತೆ ಎದ್ದುಕಾಣುತ್ತದೆ. ಇದನ್ನು ಹೋಗಲಾಡಿಸಲಿಕ್ಕಾಗಿಯೂ ಮತ್ತು ನೂರಾರು ಜಾತ್ರೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದರೆ ಸಾವಿರಾರು ಪುಟಗಳ ಪ್ರಬಂಧವಾಗಿಬಿಡುವುದೆಂಬ ಕಾರಣದಿಂದ ಸಂಕ್ಷಿಪ್ತವಾಗಿ ಜಿಲ್ಲೆಯ ಜಾತ್ರೆಗಳ ಬಗ್ಗೆ ವಿವರಿಸಲಾಗಿದೆ. ಜಾತ್ರೆ ನಡೆಯುವ ಸ್ಥಳ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಿಗೂ ಆ ಜಾತ್ರೆಗೂ ಇರುವ ದೂರ, ಆ ಊರಿನ ಸ್ಥಳನಾಮದ ಹಿನ್ನೆಲೆ, ಜಾತ್ರೆ ನಡೆಯುವ ಕಾಲ, ಅವಧಿ, ಜಾತ್ರೆಯ ಹುಟ್ಟಿಗೆ ಕಾರಣವಾದ ಅಂಶಗಳು, ಈ ಹಿಂದೆ ಜಾತ್ರೆ ನಡೆಯುತ್ತಿದ್ದ ರೀತಿ, ಇಂದು ಜಾತ್ರೆಯಲ್ಲಿರುವ ಸ್ಥಿತಿ, ಅಲ್ಲಿ ನಡೆಯುವ ಉತ್ಸವಾದಿಗಳು, ವಿಧಿಯಾಚರಣೆಗಳು, ನಂಬಿಕೆಗಳು ಮುಂತಾದವುಗಳ ಬಗ್ಗೆ ವಿವರಿಸುವುದರ ಮೂಲಕ ಪ್ರಬಂಧವನ್ನು ಹೆಣೆಯಲಾಗಿದೆ.
©2024 Book Brahma Private Limited.