‘ಸ್ವಾತಂತ್ಯ್ರ ಹೋರಾಟದಲ್ಲಿ ಕರ್ನಾಟಕ ವಿದುರಾಶ್ವತ್ಥ’ ಕೃತಿಯು ಬಿ.ವಿ. ವಸಂತಕುಮಾರ್ ಅವರ ಪ್ರಧಾನ ಸಂಪಾದಕತ್ವದಲ್ಲಿ, ನರೇಂದ್ರಕುಮಾರ್ ಎಸ್.ಎಸ್ ಅವರ ಸಂಪಾದಕತ್ವದಲ್ಲಿ, ಎಸ್.ಜಿ. ರಾಮದಾಸ ರೆಡ್ಡಿ ಅವರ ರಚನೆಯಲ್ಲಿ ಮೂಡಿಬಂದಿದೆ. ಈ ಕೃತಿಯು ಸ್ವಾತಂತ್ಯ್ರದ ಕುರಿತ ವಿಚಾರಗಳನ್ನು ತಿಳಿಸುತ್ತದೆ. ಸ್ವಾತಂತ್ರ್ಯ ಎಂಬುದು ಲೌಕಿಕವಾಗಿಯೂ ಲೋಕೋತ್ತರವಾಗಿಯೂ ಮಹೋನ್ನತವಾದ ಮೌಲ್ಯ ಭಾರತೀಯ ಸಂಸ್ಕೃತಿಯು ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಪುರುಷಾರ್ಥವೆಂದು ಕರೆದಿದೆ. ಮೋಕ್ಷವೆಂದರೆ ಬಿಡುಗಡೆ, ಸ್ವಾತಂತ್ರ್ಯ ಎಂದರ್ಥ, ಹುಟ್ಟು ಸಾವುಗಳಿಂದ ಬಿಡುಗಡೆ ಎಂಬುದು ಲೋಕೋತ್ತರವಾದ ಅರ್ಥವಾದರೆ, ಸಾವಿಲ್ಲದ, ನೋವಿಲ್ಲದ ಸ್ಥಿತಿಗಾಗಿ ಕಲ್ಯಾಣ ನಾಡಿನ ನಿರ್ಮಾಣಕ್ಕಾಗಿ ನಾವು ಗಳಿಸುವ ನಮ್ಮ ಸ್ವಯಂ ನಿಯಂತ್ರಣದ ಸ್ವಾತಂತ್ರ್ಯ ಎಂಬುದು ಲೌಕಿಕವಾದ ಅರ್ಥ, ಲೌಕಿಕ ಹಾಗೂ ಅಲೌಕಿಕಗಳು ಪರಸ್ಪರ ವಿರೋಧಿಗಳಲ್ಲ; ಅವು ಪರಸ್ಪರ ಪೂರಕವಾದವು. ಲೋಕವನ್ನು ಲೋಕೋತ್ತರದ ಔನ್ನತ್ಯಕ್ಕೆ ಏರಿಸುವ ದರ್ಶನವೇ ಭಾರತೀಯ ದರ್ಶನ. ಸ್ವಾತಂತ್ರ್ಯ ನಮ್ಮ ಧರ್ಮ, ನಮ್ಮ ಆತ್ಮ, ನಮ್ಮ ಜೀವನದ ಪರಮ ಪುರುಷಾರ್ಥ. ಅದನ್ನು ಬಯಲು ಎಂದೂ ಕರೆದಿದ್ದಾರೆ. ಅಂತಹ ಸ್ವಾತಂತ್ರ್ಯಕ್ಕಾಗಿ ಭಾರತವು ತನ್ನ ಪುರಾತನ ಕಾಲದಿಂದಲೂ ಬದುಕುತ್ತಾ ಬಂದಿದೆ. ಸ್ವಾತಂತ್ರ್ಯಕ್ಕೆ ಚ್ಯುತಿ ಬಂದಾಗಲೆಲ್ಲ ಭಾರತೀಯರು ಭರತಮಾತೆಯ ಪದತಲದಲ್ಲಿ ತಮ್ಮ ತನು- ಮನ-ಧನಗಳನ್ನು ಅರ್ಪಿಸಿದ್ದಾರೆ. ಅದನ್ನು ರಸಋಷಿ ಕುವೆಂಪು ಅವರು “ಇಂದು ರಕ್ತದ ಬಿಂದು ನಾಳೆ ಸೌಖ್ಯದ ಸಿಂಧು” ಎಂದು ಕರೆದಿದ್ದಾರೆ ಎಂಬುದನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
©2024 Book Brahma Private Limited.