‘ಕನ್ನಡ ನಾಡು, ನುಡಿ ಮತ್ತು ಗಡಿ’ ಕೃತಿಯು ಎಸ್.ವಿ. ಪಾಟೀಲ ಅವರ, ಗಡಿ ಸಮಸ್ಯೆ ಕುರಿತ ಪ್ರಬಂಧ ಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಗುರುಪಾದ ಮರಿಗುದ್ದಿ ಅವರು, ಕನ್ನಡ ನಾಡು, ನುಡಿ, ಗಡಿಗಳ ಬಗ್ಗೆ ಹೊಂದಿದ ಆಳದ ತಿಳುವಳಿಕೆ ಮತ್ತು ದಶಕಗಳ ಕಾಲ ಅನ್ನಗಳ ಜೊತೆಗೆ ಪಡೆದ ಸಂಬಂಧಗಳಿಂದಾಗಿ ಎಸ್. ಎ. ಪಾಟೀಲರು ವಿಶಿಷ್ಟ ವ್ಯಕ್ತಿತ್ವ ರೂಢಿಸಿಕೊಂಡಿದ್ದಾರೆ. ಅವರು ಇಲ್ಲಿ ತಮ್ಮ ಅನುಭವದ ಬುತ್ತಿ ಬಿಚ್ಚಿ ಕನ್ನಡದ ವಾಸ್ತವವನ್ನು ಪರಿಚಯಿಸಿದ್ದಾರೆ. ಕನ್ನಡಕ್ಕೆ ಸುತ್ತಿಕೊಂಡ ಸಮಸ್ಯೆಗಳು, ಹೋರಾಟಗಳು, ಒಳಸೂಕ್ಷ್ಮಗಳು, ಆರೇಳು ದಶಕಗಳ ಅವರ ಅನುಭವದಿಂದಲೇ ಮೂರ್ತಗೊಂಡಿದೆ. ಇಲ್ಲಿಯ ನಿಖರ ಮಾಹಿತಿ, ಉದ್ವೇಗರಹಿತ ಸಾಧಾರ ವಿವೇಚನೆಗಳು ಕನ್ನಡಗರಿಗೆ, ಕನ್ನಡಪರ ಹೋರಾಟಗಾರರಿಗೆ ದೀಪಸ್ತಂಭದಂತಿವೆ. ನಾಡು, ನುಡಿ, ಗಡಿಗಳ ವಿಚಾರದಲ್ಲಿ ಭಾವನಾವಡ, ಅಭಿಮಾನಪರತೆಗಳ ಗಿಂತ, ಸಮಸ್ಯೆಗಳ ಗಾಢವಾದ ಅರಿವು ಪಡೆಯಬೇಕಾದ ತುರ್ತು ಹೆಚ್ಚುತ್ತಿರುವ ಇಂದಿನ ಸಂದರ್ಭಕ್ಕೆ ಪ್ರಸ್ತುತ ಕೃತಿ ಬಹುಮೌಲ್ಯ ಆಕರ ಗ್ರಂಥವಾಗಿದೆ. ಇಲ್ಲಿ ಪಾಟೀಲರು ಮ೦ಡಿಸುವ ವಾದ, ತರ್ಕ, ತೋರುವ ವಿವೇಕ, ತಿಳುವಳಿಕೆಗಳು ನಮ್ಮ ಕಣ್ಣು ತೆರೆಯಿಸಬೇಕು. ಕಾನೂನು ಶಿಕ್ಷಣ ಪಡೆದ ಲೇಖಕರು, ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗಲೂ ನಾಡಿನ ಹೃದಯ ಸ್ಥಳವಾದ ಬೆಳಗಾವಿಯಲ್ಲಿ ಕನ್ನಡಪರ ಕಾರ್ಯಗಳಲ್ಲಿ ಸದಾ ತೊಡಗಿಕೊಂಡಿದ್ದಾರೆ. ಗಡಿ ವಿವಾದ ಕಾನೂನು ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಭಾಷೆ, ಇತಿಹಾಸ, ಸಂಸ್ಕೃತಿಗಳ ಕುರಿತು ಅವರು ಹೊಂದಿರುವ ಪ್ರೀತಿ, ಕಾಳಜಿ, ವಿಶ್ವಾಸಗಳು ಕೃತಿಯ ಪುಟ ಪುಟದಲ್ಲಿ ಎದ್ದು ಕಾಣುತ್ತವೆ. ಅವರ ಗೃಹಿಕೆಗಳು, ಅಭಿವ್ಯಕ್ತಿ ವಿಶಿಷ್ಟವಾಗಿರುವ ಕಾರಣ ಕೃತಿಯು ನಮ್ಮೆಲ್ಲರಿಗೆ ಒಂದು ಕೈಪಿಡಿಯಂತಾಗಿದೆ ಎಂದಿದ್ದಾರೆ.
©2024 Book Brahma Private Limited.