ಲೇಖಕರಾದ ವೀರಶೆಟ್ಟಿ ಬಿ. ಗಾರಂಪಳ್ಳಿ ಹಾಗೂ ಇಂದುಮತಿ ಪಿ. ಪಾಟೀಲ ಅವರು ಸಂಪಾದಿಸಿರುವ ಕೃತಿ ಕಲ್ಯಾಣ ಕರ್ನಾಟಕದ ಅಮೂರ್ತ ಪರಂಪರೆ. ಭಾರತೀಯ ಸಂದರ್ಭದ ಚರಿತ್ರೆಯಲ್ಲಿ ‘ಏಕಸಂಸ್ಕೃತಿ’ ‘ಏಕಪರಂಪರೆ’ ಎಂಬುದೊಂದು ಯಾವತ್ತಿಗೂ ಉಸಿರಾಡಿದ್ದಿಲ್ಲ. ಭಾರತ ಯಾಹೊತ್ತಿಗೂ ‘ಬಹುಸಂಸ್ಕೃತಿ’ ‘ಬಹುಪರಂಪರೆ’ಗಳ ಒಕ್ಕೂಟ ವ್ಯವಸ್ಥೆ. ಅಂತೆಯೇ ಈ ದೇಶದಲ್ಲಿ ಹಲವು ಜನಾಂಗಗಳಿರುವಂತೆ ಹಲವು ಧರ್ಮಗಳಿವೆ. ಆ ಎಲ್ಲ ಧರ್ಮಗಳು ಈ ದೇಶಕ್ಕೆ ಮತ್ತು ಜಗತ್ತಿಗೆ ಒಳ್ಳೆಯದನ್ನೇ ಬೋಧಿಸಿವೆ. ಈ ಬೋಧನೆಯಲ್ಲಿ ‘ದೇಸಿಯತೆ’ಯ ಅಮೃತವಾಹಿನಿಯೊಂದು ಎದೆಯಿಂದಲೆದೆಗೆ ಸದಾ ಹರಿದಿದೆ; ಹರಿಯುತ್ತಿದೆ. ನಮ್ಮ ಪಂಪ ಅದನ್ನು ‘ದೇಸಿಯೊಳ್ ಪುಗುವುದು ಪೊಕ್ಕು ಮಾರ್ಗದೊಳೆ ತಳ್ವುದು’ ಎಂದು ಉತ್ತರದ ಮೂಲಭಾವಕ್ಕೆ ಸಂವಾದಿಯಾಗಿ ದಕ್ಷಿಣದ ‘ಮಾರ್ಗ’ ಮತ್ತು ‘ದೇಸಿ’ಯತೆಯನ್ನು ಪ್ರತಿಷ್ಠಾಪಿಸುವ ಮೂಲಕ ಪ್ರಾದೇಶಿಕ ಭಿನ್ನತೆಯನ್ನು; ಅಸ್ಮಿತೆಗಳನ್ನು ಎತ್ತಿಹಿಡಿಯುವ ಕಾರ್ಯ ಮಾಡಿದ. ಅದನ್ನೇ ನಮ್ಮ ಕವಿರಾಜಮಾರ್ಗಕಾರ ‘ಕಸವರಮೆಂಬುದು ನೆರೆಸೈರಿಸಲಾರ್ಪೊಡೆ ಪರಧರ್ಮಮುಮಂ ಪರವಿಚಾರಮುಮಂ’ ಎಂದು ಹೇಳುವ ಮೂಲಕ ಎಲ್ಲವನ್ನೂ ಸ್ವೀಕರಿಸುವ ಮತ್ತು ತನ್ನದನ್ನು ಉಳಿಸಿಕೊಳ್ಳುವ ಮೀಮಾಂಸೆಯ ಕುರಿತಾಡಿರುವ ಮಾತುಗಳು ಕಲ್ಯಾಣ ಕರ್ನಾಟಕ ಜನತೆಯ ಜೀವಧ್ವನಿಗಳು ಎಂದು ನಮಗನಿಸುತ್ತವೆ. ಬಹುಭಾಷಿಕ-ಬಹುಸಾಂಸ್ಕೃತಿಕ ಪರಂಪರೆಗಳನ್ನುಳ್ಳ ಈ ದೇಶದ ‘ಬಹುತ್ವ’ವನ್ನೇ ಇವರಿಬ್ಬರು ಧ್ವನಿಸಿದಂತೆ ಮಾತನಾಡಿದ್ದಾರೆ. ಇಲ್ಲಿ ಒಂದನ್ನು ದಿಕ್ಕರಿಸಿ ಇನ್ನೊಂದರ ಪ್ರತಿಷ್ಠಾಪನೆ ಎಂದಾಗಲಿ ಅಥವಾ ಒಂದನ್ನು ಸಾರಸಗಟಾಗಿ ನಿರಾಕರಿಸುವುದಾಗಲಿ ಅವರು ಮಾಡಿದ್ದಲ್ಲ. ಅದನ್ನು ಒಪ್ಪಿಯೂ ತನ್ನದನ್ನು-ತನ್ನ ಬದುಕಿನ ಮೀಮಾಂಸೆಯ ಹಕ್ಕನ್ನು ಪ್ರತಿಷ್ಠಾಪಿಸಿಕೊಳ್ಳುವುದು. ಇದು ಇಡೀ ಕಲ್ಯಾಣ ಕರ್ನಾಟಕ ಜನತೆಯ ಬದುಕಿನ ಕ್ರಮ ಎಂಬುದಾಗಿ ಲೇಖಕರು ಕೃತಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.