‘ಚಿತ್ಪಾವನರ ಹಬ್ಬಗಳು’ ಮಧುರಾ ತಾಮ್ಹನ್ ಕರ್ ಅವರ ಚಿತ್ಪಾವನರ ಹಬ್ಬಗಳ ಲೇಖನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಲೇಖಕರು ಹೀಗೆ ಹೇಳಿದ್ದಾರೆ; ಚಿತ್ಪಾವನರು ಪೋರ್ಚುಗೀಸರ ಮತಾಂತರಕ್ಕೆ ಹೆದರಿ ಮಹಾರಾಷ್ಟ್ರದ ರತ್ನಾಗಿರಿಯ ರಾಜಾಪುರ ಕಡೆಯಿಂದ ಗೋವಾದ ಮೂಲಕ ಗುಂಪಾಗಿ 400ರಿಂದ 500 ವರ್ಷಗಳ ಹಿಂದೆ ವಲಸೆ ಬಂದು ಈ ರಾಜ್ಯದ ಕರಾವಳಿಯ ಗುಡ್ಡಗಾಡುಗಳಲ್ಲಿ ನೆಲೆ ನಿಂತರು. ತಮ್ಮ ಪರಿಶ್ರಮದಿಂದ ಅಡಿಕೆ ಬೆಳೆಯ ತೋಟವನ್ನು ಕಷ್ಟಜೀವಿಗಳಾಗಿ ದುಡಿದು ಬೆಳೆದಿದ್ದಾರೆ. ರತ್ನಾಗಿರಿ ಪ್ರದೇಶದ ಹಳ್ಳಿಯಂತೆಯೇ ಇಲ್ಲಿ ಕೂಡ ಮನೆ. ತೋಟ, ಝರಿ (ನೀರಿನ ವ್ಯವಸ್ಥೆ) ಮಾಡಿಕೊಂಡಿದ್ದಾರೆ. ಚಿತ್ಪಾವನರು ಮಹಾರಾಷ್ಟ್ರದ ಸ್ಮಾರ್ತ ಬ್ರಾಹ್ಮಣ ಜನಾಂಗದವರು. ಮರಾಠಿ ಮನೆಮಾತಾಗಿದ್ದರೂ ಕನ್ನಡ ಜನರೊಂದಿಗೆ ಒಂದಾಗಿ, ಸಮರಸದಿಂದ ಬಾಳುತ್ತಿದ್ದಾರೆ. ಕರ್ನಾಟಕದಲ್ಲಿ ವಿವಿಧ ಸಂಸ್ಕೃತಿಯ ಜನ ಇರುವಂತೆ, ಕರ್ನಾಟಕದಲ್ಲಿ ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶಗಳಲ್ಲಿ ಚಿತ್ಪಾವನರು ನೆಲೆಸಿದ್ದಾರೆ. ಕಡಿಮೆ ಸಂಖ್ಯೆಯಲ್ಲಿದ್ದರೂ ತಮ್ಮ ವಿಶಿಷ್ಟ ಆಚರಣೆಗಳಿಂದ ಗಮನ ಸೆಳೆದಿದ್ದಾರೆ. ದೈವಭಕ್ತರಾದ ಅವರು ದೇವರ ಕಾರ್ಯ, ಆರಾಧನೆ ಮಾಡುತ್ತಾ ಸಾಮಾಜಿಕವಾಗಿ ಜನರಿಗೆ ಉಪಕಾರ ಮಾಡುತ್ತಾ ತಮ್ಮ ಜನ್ಮ ಸಾರ್ಥಕ ಮಾಡಿಕೊಳ್ಳುತ್ತಾರೆ. ಅವರು ನಡೆಸುವ ಪ್ರತಿಯೊಂದು ಪೂಜೆ. ವ್ರತಕ್ಕೂ ಅದರದೇ ಕಥೆಗಳಿವೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಚಿತ್ಪಾವನರ ಹಬ್ಬಗಳ ಆಚರಣೆ ಕುರಿತು ಈ ಕೃತಿಯಲ್ಲಿ ದಾಖಲಿಸಿದ್ದೇನೆ.
©2024 Book Brahma Private Limited.