‘ಒಲವು ನಮ್ಮ ಬದುಕು’ ಸುದೇಶ ದೊಡ್ಡಪಾಳ್ಯ ಅವರ ಪ್ರೇಮ ಸರಣಿ ಕಥನವಾಗಿದೆ. ಜಾತಿ ವಿನಾಶದ ದಾರಿಯಲ್ಲಿ ಈ ಬಗೆಯ ಪ್ರೇಮ ವಿವಾಹಗಳು ಅತ್ಯಂತ ಪರಿಣಾಮಕಾರಿಯಾದ ಪಾತ್ರ ವಹಿಸಬಲ್ಲವೆಂಬುದು ಕಣ್ಣೆದುರಿನ ಸತ್ಯವಾಗಿದೆ. ಅಷ್ಟೇ ಅಲ್ಲ ‘ಸ್ವಗೋತ್ರ ವಿವಾಹ ಸಲ್ಲ’ ಎಂಬ ಮಾತು ಹಿಂದಿನಿAದಲೂ ನಮ್ಮ ನಡುವೆ ಬಳಕೆಯಲ್ಲಿದೆ. ಅದನ್ನು ಅನುಸರಿಸಿಯೇ ‘ಸ್ವಜಾತಿ ವಿವಾಹ ಸಲ್ಲದ್ದು’ ಎಂಬ ತೀರ್ಮಾನಕ್ಕೆ ಈ ಸಮಾಜವು ಬಂದಾಗ ನಿಜವಾದ ಆತ್ಮೀಯತೆಯ, ಆರೋಗ್ಯಕರವಾದ ಚಿಂತನೆ ಮತ್ತು ಕ್ರಿಯೆಗಳ ಅನಂತ ಸಾಧ್ಯತೆಗಳ ಹೊಸತೂಬು ತೆರೆದಂತಹ ರೋಮಾಂಚನಕಾರಿ ಸಂಚಲನ ಉಂಟಾಗುತ್ತದೆ. ಸಾಮಾನ್ಯವಾಗಿ ಸ್ವಜಾತಿ ವಿವಾಹಗಳು ಒಂದೇ ವಾತಾವರಣದಲ್ಲಿ ಹುಟ್ಟಿಬೆಳೆದ ಕುಟುಂಬದ ಸದಸ್ಯರ ಮದುವೆಗಳಂತೆ ಯಾಂತ್ರಿಕತೆ ಮತ್ತು ಏಕತಾನತೆಗಳ ನೀರಸತನವನ್ನು ಹೊಂದಿದ್ದು, ಕಾಂತಿಹೀನವಾಗಿರುತ್ತದೆ. ಮಧುಚಂದ್ರದ ಅವಧಿಯಲ್ಲಿ ಸಹ ಪರಸ್ಪರ ಹಂಚಿಕೊಳ್ಳುತ್ತಾ, ಆನಂದಿಸುವ ನಿಜವಾದ ರೋಮಾಂಚಕ ಕ್ಷಣಗಳ ಅಪರಿಚಿತ ಭಾವನಾಲೋಕದ ಮಾಂತ್ರಿಕತೆಯ ಸ್ಪರ್ಶದಿಂದ ವಂಚಿತವಾಗಿದ್ದು, ಕೇವಲ ಆಕಳಿಕ-ತೂಕಡಿಕೆಗಳ ಹೊದಿಕೆ ಮತ್ತು ಹಾಸಿಗೆಗಳನ್ನೇ ಕಾಣುತ್ತಿರುತ್ತೇವೆ. ಅದರ ಬದಲು ಜಾತಿ, ಭಾಷೆ, ದೇಶಧರ್ಮಗಳ ಗಡಿಗೆರೆಗಳನ್ನು ದಾಟಿದ ಅಂತರAಗದ ಆಯ್ಕೆಯ ಪ್ರತಿರೂಪವಾದ ಪ್ರೇಮವಲಯದಲ್ಲಿ ಮಾತ್ರ ಕ್ಷಣಕ್ಷಣಕ್ಕೂ ವ್ಯಕ್ತಿಗಳ ತಾಜಾತನಕ್ಕೆ ಒಡ್ಡುವ ಅನಂತ ಸವಾಲುಗಳು ಮತ್ತು ಪರೀಕ್ಷೆಗಳು ಇದ್ದು, ಅವುಗಳಲ್ಲಿ ಗೆದ್ದು, ಮಿಂದು ಮಡಿಯಾಗುವ ಅನಂತ ಸಂದರ್ಭಗಳ ಮಧುರತರವಾದ ಅನುಭವ ಲೋಕವಿರುತ್ತದೆ. ಇದೆಲ್ಲ ಜೀವಮಾನ ಪೂರ್ತಿ ಪರಸ್ಪರ ಬೆರೆತು, ಅರಿತು, ಮಾಗುತ್ತಾ ಸಾಗುವ ಆನಂದಯುಕ್ತ ಬದುಕಿನ ಜನ್ಮ ಸಾಫಲ್ಯದ ಕ್ರಮವಾಗಿರುತ್ತದೆ. ಅಪರಿಮಿತವಾದ ಅಕ್ಕರೆಯಿಂದ ಗೆಳೆಯ ಸುದೇಶ ಅವರು ಸಿದ್ಧಪಡಿಸಿರುವ ‘ಒಲವು ನಮ್ಮ ಬದುಕು’ ಕೃತಿಯು ಕನ್ನಡದ ವಿವೇಚನಶೀಲ ಓದುಗರೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಾನು ನಂಬಿದ್ದೇನೆ. ಹಾಗೆಯೇ ಜೀವಂತಿಕೆಯಿಂದ ಬದುಕುವ ಕ್ಷಣಗಳ ಸಂತೋಷದಾಯಕ ಸ್ಥಿತಿಯ ಸಾಕ್ಷಾತ್ ದರ್ಶನ ಇಲ್ಲಿ ಸಾಧ್ಯವಾಗುತ್ತಿರುವ ಚೋದ್ಯವನ್ನು ನಾವು ಕಣ್ಣಾರೆ ಕಾಣಬಹುದಾಗಿದೆ ಎಂದು ಪ್ರೊ ಕಾಳೇಗೌಡ ನಾಗವಾರ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.