ಅನಂತ ಮೂರ್ತಿಯವರ 'ನವ್ಯ ಕಥೆಗಳು' ಕನ್ನಡ ಸಾಹಿತ್ಯಕ್ಕೆ ಬರುತ್ತಿರುವ ಹೊಸ ನೀರು; ಅತ್ಯಂತ ಗಮನಾರ್ಹವಾದ ಕಲಾಕೃತಿಗಳು;ಸಣ್ಣಕಥೆಯ ಬಗ್ಗೆ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುವಂಥವು.ಇಲ್ಲಿ ಇರುವ ಸಣ್ಣಕತೆಗಳಲ್ಲಿ ತಂತ್ರದೃಷ್ಟಿಯಿಂದ 'ತಾಯಿ 'ಮತ್ತು 'ಹುಲಿಯ ಹೆಂಗರುಳು' -ಅತ್ಯುತ್ತಮವಾದ ಕಥೆಗಳು ಎನ್ನಬಹುದು.ಅವು ಈ ಸಂಕಲನದಲ್ಲಿ ಮಾತ್ರವಲ್ಲ ,ನಮ್ಮ ಕಥಾಲೋಕದಲ್ಲೇ ಎರಡು ಉಜ್ವಲರತ್ನಗಳು ಎಂದು ಮುನ್ನುಡಿ ಬರೆದ ಗೋ.ಕೃ.ಅಡಿಗರು ಹೇಳುತ್ತಾರೆ. 'ತಾಯಿ ಎಂಬ ಕಥೆಯಲ್ಲಿ ಕ್ರೂರಿಯಾದ ಇನ್ನೊಬ್ಬ ತಾಯಿಯ ಕಥೆಯನ್ನು ತನ್ನ ಮಗ ಶೀನನಿಗೆ ಹೇಳುತ್ತ,ತನ್ನ ಕ್ರೂರವಾಕ್ಯಕ್ಕೆ ರೇಗಿ ಮನೆ ಬಿಟ್ಟುಹೋದ ದೊಡ್ಡಮಗನನ್ನು ನೆನೆಯುತ್ತ ಪರ್ಯಾಯವಾಗಿ ತನ್ನ ಕ್ರೂರತ್ವದ ಭೂತಾಕಾರವನ್ನು ಕಂಡು ನಡುಗುವ ತಾಯಿ ಅಬ್ಬಕ್ಕನ ಚಿತ್ರ ಮನ ಕರಗುವಂತೆ ಚಿತ್ರಿತವಾಗಿದೆ. ಮಾತೃಹೃದಯದ ಈ ಕಾತರ ದೇಶಕಾಲ ಪರಿಮಿತವಾದದ್ದಲ್ಲ.ಸಾರ್ವಕಾಲಿಕ,ಸಾರ್ವದೇಶಿಕ ಎಂಬ ಭಾವವನ್ನೂ ಕೆರಳಿಸುತ್ತದೆ.ಕ್ರೂರವಾಗಿ ತನ್ನ ಮಗುವನ್ನು ಕತ್ತಲಲ್ಲಿ ಮನೆ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡು ಅದು ಹುಲಿಬಾಯಿಗೆ ತುತ್ತಾಗಲು ಬಿಟ್ಟ ಅಜ್ಞಳೂ ಕೋಪಪ್ರವೇಶಳೂ ಆದ ಆ ಇನ್ನೊಬ್ಬ ತಾಯಿಯ ಕಥೆ;ತಾಯಿಮಕ್ಕಳ ಮಧುರ-ಕಟು ಬಾಂಧವ್ಯ ಇಲ್ಲಿ ಒಂದಾಗಿ ಏಕಪ್ರವಾಹವಾಗಿ ಹರಿಯುವ ರೀತಿ ಉತ್ತಮ ಪ್ರತಿಭೆಗೆ ನಿದರ್ಶನ. ಇಷ್ಟೇ ಪರಿಣಾಮಕಾರಿಯಾದರೂ ಇನ್ನಷ್ಟು ಶ್ರೀಮಂತವಾಗಿರುವುದು 'ಹುಲಿಯ ಹೆಂಗರುಳು' ಎಂಬ ಕಥೆ. ಇದು ಸಿದ್ಧನ ಮನಸ್ಸಿನ ಕೋಲಾಹಲದ ಚಿತ್ರ; ಸೇಡಿನ ಆಶೆ,ಮರುಕ,ಪಶ್ಚಾತ್ತಾಪ-ಇವುಗಳ ನಡುವೆ ಅವನ ಮನಸ್ಸಿನಲ್ಲಿ ನಡೆಯುವ ಭೀಕರ ಯುದ್ಧದ ಸೂಚ್ಯಕಥನ.ತನ್ನ ಹೆಂಡತಿಯ ಉಪಪತಿಯಾದ ಶೀನಶೆಟ್ಟಿಯನ್ನು ತೀರಿಸಿಬಿಡಬೇಕೆಂಬ ಪ್ರತೀಕಾರ ಬುದ್ಧಿಯೊಡನೆ ಹೇಗೋ ಹಾಗೆಯೇ ತುಂಬಿ ಮೊರೆಯುತ್ತ ಪ್ರವಾಹದಲ್ಲಿ ಹುಟ್ಟು ಹಿಡಿದು ಸೆಣಸುತ್ತಿರುವ ಸಿದ್ಧನಿಗೆ ಕೊನೆಯ ಮುಹೂರ್ತದಲ್ಲಿ,ತನ್ನ ಶತ್ರು ಶೀನಶೆಟ್ಟಿಯೇ ಅಲ್ಲಿ ಬಂಡೆಯ ಮೇಲಿನ ಬಡಪಾಯಿ ಎಂಬುದು ತಿಳಿದಾಗ ಉಂಟಾಗುವ ವಿದ್ಯುದಾಘಾತ ಸಿದ್ಧನ ಮೇಲೆ ಹೇಗೋ ಹಾಗೆಯೇ ಓದುವವರ ಮೇಲೂ ಅದ್ಭುತ ಪರಿಣಾಮವನ್ನು ಮಾಡುತ್ತದೆ.ಸಿದ್ಧ ಕೊನೆಗೂ ,ತನ್ನ ಶತ್ರುವನ್ನೂ ಬದುಕಿಸಲು ಸಿದ್ಧನಾಗುವಾಗ ಅದರ ಸಂಕೇತವಾಗಿ ಅವನ ಕೈಲಿದ್ದ ಕತ್ತಿಯೂ ಬಿದ್ದುಬಿಡುತ್ತದೆ.ವ್ಯಕ್ತಿ ಮತ್ತು ಸಮಾಜದ ಏಕಕಾಲ ಚಿತ್ರಣದಿಂದ ಈ ಕಥೆ ಅತ್ಯುತ್ತಮವಾದದ್ದು.
©2024 Book Brahma Private Limited.