ಲೇಖಕಿ ಶಾಂತಾದೇವಿ ಕಣವಿ ಅವರ ಇದುವರೆಗಿನ ಕಥೆಗಳ ಸಂಗ್ರಹ ‘ಕಥಾಮಂಜರಿ’. ಈ ಸಮಗ್ರ ಕೃತಿಯಲ್ಲಿ 8 ಕಥಾ ಸಂಕಲನಗಳ 99 ಕಥೆಗಳಿವೆ. ಈ ಸಮಗ್ರ ಸಂಕಲನದಲ್ಲಿ ಗಿರಡ್ಡಿ ಗೋವಿಂದರಾಜ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ.
ಅನುಕಂಪದಲ್ಲಿ, ನಿರುದ್ವಿಗ್ನವಾಗಿ ಕಥೆ ಹೇಳುವ ಕ್ರಮದಲ್ಲಿ ವಾಸ್ತವವಾದಿ ಚಿತ್ರಣದಲ್ಲಿ ಮಾಸ್ತಿಯವರ ಪ್ರಭಾವ ಶಾಂತಾದೇವಿಯವರ ಮೇಲೆ ದಟ್ಟವಾಗಿ ಹರಡಿರುವುದು ಕಾಣುತ್ತದೆ. ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಅದು ಅವರ ಈಚಿನ ಕತೆಗಳಲ್ಲೂ ಮುಂದುವರಿದುಕೊಂಡು ಬಂದಿದ, ಬದುಕಿನಲ್ಲಿ ನೋವು ಇದ್ದರೂ, ಸಹನೆಯ ಮೂಲಕ, ಹೊಂದಾಣಿಕೆಯಿಂದ, ತಿಳುವಳಿಕೆಯಿಂದ, ಪ್ರೀತಿಯಿಂದ, ತ್ಯಾಗದಿಂದ ಅದನ್ನು ಸರಿಪಡಿಸಿಕೊಳ್ಳಬಹುದೆಂಬ ಮಾಸ್ತಿಯವರ ನಿಲುವು ಶಾಂತಾದೇವಿಯವರ ಕತೆಗಳಲ್ಲೂ ಕಾಣುತ್ತದೆ. ಅಂತೆಯೇ ಅವರ ಎಲ್ಲ ಮಹತ್ವದ ಕತೆಗಳಲ್ಲಿ ಸಮಸ್ಯೆ ದೀರ್ಘಕ್ಕೆ ಹೋಗಿ ಹರಿಯುವುದಿಲ್ಲ. ನವ್ಯಕತೆಗಳಲ್ಲಿಯಂತೆ ಸಂದಿಗ್ಧದಲ್ಲೂ ನಿಲ್ಲುವುದಿಲ್ಲ. ಬದಲಾಗಿ ಸಮಾಧಾನಕರವಾದ ಮರು ಹೊಂದಾಣಿಕೆಯಲ್ಲಿ ಅಥವಾ ನಿಶ್ಚಿತ ಪರಿಹಾರದಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಇದಕ್ಕೆ ಅಪವಾದವಾಗಿ ಒಂದೆರಡು ಕತೆಗಳು ಕಾಣುತ್ತವಾದರೂ ಅವರ ಮುಖ್ಯ ಕಾಳಜಿ ಇರುವುದು ಹೊಂದಾಣಿಕೆಯಲ್ಲಿ.
ಅವರ ಎಲ್ಲ ಸಣ್ಣಕತೆಗಳಲ್ಲೂ ಎದ್ದು ಕಾಣುವ ಒಂದು ಮುಖ್ಯ ಅಂಶವೆಂದರೆ ಕಥೆ ಹೇಳಬೇಕೆನ್ನುವ ತವಕ, ವೈಚಾರಿಕತೆಯನ್ನು ಅದರ ಪಾಡಿಗೆ ಬಿಟ್ಟು, ಸ್ವಾರಸ್ಯವಾಗಿ ಕಥೆ ಹೇಳುವುದರಲ್ಲಿಯೇ ಅವರು ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಘಟನೆಗಳ ನಿರೂಪಣೆಗಾಗಿಯೇ ಅವರ ಕಲೆಗಾರಿಕೆಯ ಎಲ್ಲ ಸಾಧನಗಳೂ ದುಡಿಯುತ್ತವೆ. ದೀರ್ಘ ವರ್ಣನೆಗಳಾಗಲಿ, ವೈಚಾರಿಕ ಗೊಂದಲಗಳ ವಿಶ್ಲೇಷಣೆಗಳಾಗಲಿ ಅವರ ಕತೆಗಳಲ್ಲಿ ಇಲ್ಲ. ನೇರವಾಗಿ ಕಥೆಯ ನಿರೂಪಣೆಯೇ ಇದೆ. ಅವರ ಕತೆಗಳು ಚಿಕ್ಕವಾಗಿರುವುದಕ್ಕೆ ಇದೂ ಒಂದು ಕಾರಣ. ಈಚಿನ ಕೆಲವು ಕತೆಗಳಲ್ಲಿ - ನವ್ಯದ ಪ್ರಭಾವದಿಂದಲೋ ಏನೊ - ಪಾತ್ರಗಳ ಮನೋವಿಶ್ಲೇಷಣೆಯನ್ನೂ ಅವರು ಅಳವಡಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಇದು ನವ್ಯಕಥೆಗಳಲ್ಲಿ ಬರುವ ಮಾನಸಿಕ ತೊಳಲಾಟ, ಸಾಂಕೇತಿಕತೆ, ಸಂದಿಗ್ಧತೆ, ಹೊಯ್ದಾಟಗಳ ಮಾದರಿಯ ಪ್ರಜ್ಞಾಪ್ರವಾಹ ತಂತ್ರವಲ್ಲ. ಅದು ಅವರ ಕತೆಗಾರಿಕೆಯ ಸಹಜ ಸ್ವಭಾವಕ್ಕೆ ಒಗ್ಗುವುದಿಲ್ಲ. ಪಾತ್ರಗಳ ಒಳಮನಸ್ಸಿನ ಕಡೆಗೆ ತಿರುಗಿದ ಕೂಡಲೇ ಅವು ಸ್ವಗತಗಳಾಗಿ ಆತ್ಮವಿಶ್ಲೇಷಣೆಗಲ್ಲ - ಆತ್ಮಕಥೆಗೆ ತಿರುಗಿಕೊಳ್ಳುತ್ತವ. ಈ ಆತ್ಮಕಥೆಗಳಲ್ಲಿ ಫ್ಲ್ಯಾಷ್‌ಬ್ಯಾಕಿನ ರೀತಿಯಲ್ಲಿ ಹಿಂದೆ ನಡೆದ ಘಟನೆಗಳೇ ನಿರೂಪಿತವಾಗಿ ಕಥೆಯನ್ನು ಬೆಳೆಸುತ್ತವೆ. ಉದಾಹರಣೆಯೆಂದು ಬಯಲು-ಆಲಯ' ಕತೆಯ ಜಾನಕ್ಕನ ನೆನಪು-ಹಳವಂಡ ಆತಂಕಗಳನ್ನು ನೋಡಬಹುದು. ಅವೆಲ್ಲ ಗಂಡನೊಂದಿಗೆ ನಡೆದಿದ್ದ ಜಗಳದ ಕಥೆಯನ್ನು ನಿರೂಪಿಸುತ್ತವೆ. ಎಷ್ಟೋ ಸಲ ಸಂಭಾಷಣೆಗಳೂ ಸಹ ಘಟನೆಗಳನ್ನೇ ನಿರೂಪಿಸುತ್ತವ ಶಾಂತಾದೇವಿಯವರ ಬಹಳಷ್ಟು ಕತೆಗಳಲ್ಲಿ ಚಿತ್ರಿತವಾಗಿರುವ ಮುಖ್ಯ ವಸ್ತು ಕೌಟುಂಬಿಕ ಬಿಕ್ಕಟ್ಟು, ಭಾರತದ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಎದುರಿಸಬೇಕಾದ ಸಮಸ್ಯೆಗಳು, ಈ ವಸ್ತುವನ್ನು ಅವರು ಮೂರು ನೆಲೆಗಳಲ್ಲಿ ನಿರ್ವಹಿಸಿದ್ದಾರೆ. ಒಂದು, ಗ್ರಾಮೀಣ ಕೌಟುಂಬಿಕ ವ್ಯವಸ್ಥೆಯ ನೆಲೆ, ಇಂಥ ಕತೆಗಳು ಕೆಲವೇ ಇದ್ದರೂ, ಅವುಗಳ ಸ್ವರೂಪ-ಪರಿಹಾರ ಭಿನ್ನವಾಗಿವೆ. ಇನ್ನೊಂದು, ಸುಶಿಕ್ಷಿತ ಮಧ್ಯಮ ವರ್ಗದ ನೆಲೆ. ಈ ಹಿನ್ನೆಲೆಯ ಕತೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಬಹುಶಃ ಇದು ಶಾಂತಾದೇವಿಯಮಗೆ ಹೆಚ್ಚು ಪರಿಚಿತವಾದ ಲೋಕವಾಗಿರುವುದೇ ಇದಕ್ಕೆ ಕಾರಣವಾಗಿದೆ. ಇಲ್ಲಿಯ ಸಮಸ್ಯೆಗಳಲ್ಲಿ ಮತ್ತು ಸನ್ನಿವೇಶಗಳಲ್ಲಿ ಸಾಕಷ್ಟು ವೈವಿಧ್ಯವಿದೆ ಎಂದು ಗಿರಡ್ಡಿ ಗೋವಿಂದರಾಜ ಮುನ್ನುಡಿಯಲ್ಲಿ ಬರೆದಿದ್ದಾರೆ.
ಸಂಜೆ ಮಲ್ಲಿಗೆ (1960-1967) ಸಂಕಲನದಲ್ಲಿ ಮಂಜು ಕರಗಿತು, ಪಂಚ ಕನ್ಯೆಯರು, ಕಿತ್ತು ಹಚ್ಚಿದ ಗಿಡ, ಚಂದ್ರಗ್ರಹಣ, ಯೋಧನ ಆತ್ಮ ಸಂಚಾರ, ಐದರ ನೋಟು, ಅನ್ನ ದೇವರು ಬಂದ, ಎಲ್ಲರ ಮನೆ ದೋಸೆಗೂ.., ಸ್ವರೂಪ ದರ್ಶನ, ದೂರದ ಗುಡ್ಡ, ಗೃಹಿಣಿ, ತಾಯಿ ಕಂಡ ಕನಸು, ನೀವೂ ಒಬ್ಬರೆ?, ಸಂಜೆ ಮಲ್ಲಿಗೆ ಎಂಬ ಕಥೆಗಳಿವೆ. ಬಯಲು-ಆಲಯ (1967-1973) ಸಂಕಲನದಲ್ಲಿ ಬಯಲು-ಆಲಯ, ತ್ರಿದಳ, ಕಾಮನ ಬಿಲ್ಲು, ದಿಗಂತ, ತೆತ್ತ ಬೆಲೆ, ಪರಿಮಳದ ಸುಳಿಯಲ್ಲಿ, ತಾಯ್ತನ,ಲೋಲಾಕು, ನಿರೀಕ್ಷೆ, ಮಮತೆ, ಇದಕ್ಕೇನನ್ನ ಬೇಕು?, ಹರಿದು ಹಾಕಿದ ಪುಟಗಳು, ಬೀಗದ ಕೈ, ಹುತ್ತದಿಂದ ಹೊರಗೆ, ಸತ್ಕಾರ, ಪ್ರೇಮಪತ್ರ, ಬಕ್ತ್ಯಾದರ, ಹುತ್ತ, ದೀಪದ ಕೆಳಗೆ, ಪ್ರಯಾಣ ಎಂಬ ಕಥೆಗಳಿವೆ. ಮರು ವಿಚಾರ (1973-1978) ಸಂಕಲನದಲ್ಲಿ ಮರುವಿಚಾರ, ಮೂಕಸಾಕ್ಷಿ, ಆಸರೆ, ಹೊಸ ಅಲೆ, ಹೆಣ ಎತ್ತಿದ ಮೇಲೆ, ಸಿಹಿ ಹಾಗಲ, ಪರಿಹಾರ, ಅತ್ತಿಗೆ, ಹೆಣ್ಣು-ಗಂಡು, ಡಾಲಿ ಎಂಬ ಕಥೆಗಳಿವೆ. ಜಾತ್ರೆ ಮುಗಿದಿತ್ತು(1978-1981) ಸಂಕಲನದಲ್ಲಿ ಜಾತ್ರೆ ಮುಗಿದಿತ್ತು, ಪ್ರಮೇಯ, ಸುಶೀಲೆ, ಕಥೆಯಾದವಳು ಹುಡುಗಿ, ಸಿರಿ, ಕ್ಯಾನ್ಸರ್, ವರ್ಗ ರದ್ದಾಯಿತು ಎಂಬ ಕಥೆಗಳಿವೆ. ಕಳಚಿ ಬಿದ್ದ ಪೈಜಣ (1981-1987) ಸಂಕಲನದಲ್ಲಿ ಕಳಚಿ ಬಿದ್ದ ಪೈಜಣ, ಮಗು, ಅರ್ಧಾಂಗಿ, ಮಗುವಿಗಾಗಿ, ಸೇಡಿನ ಹಿಂದೆ-ಮುಂದೆ, ಉತ್ಸವ, ಪರಿಸ್ಥಿತಿ, ಇಕ್ಕಟ್ಟು, ಮುಖಾಮುಖಿ, ಆಘಾತ, ‘ಇದುವೆ ಜೀವ, ಇದು ಜೀವನ’, ಶ್ರೀದೇವಿ, ಬಾರುಕೋಲು ಎಂಬ ಕಥೆಗಳಿವೆ. ನೀಲಿಮಾ ತೀರ (1987-1992) ಸಂಕಲನದಲ್ಲಿ ಒಂದು ಮೂಗುತಿಯ ಕಥೆ, ಹರಕೆ, ನೀಲಿಮ ಆತೀರ, ಗುಳದಾಳಿ, ದೇವಿ, ಎರಡೂ ಧ್ರುವಗಳೇ, ಮತ್ತದೇ ರಾಗ, ಅಂತ್ಯ ಸಂಸ್ಕಾರ, ಚಿತ್ರ, ಹರಿದ ಚೂರು ಹೊಂದಿಸಿ ಎಂಬ ಕಥೆಗಳಿವೆ. ಗಾಂಧೀ ಮಗಳು(1992-1997)ಕಥಾ ಸಂಕಲನದಲ್ಲಿ ಗಾಂಧೀ ಮಗಳು, ಕಾಣೆಯಾದವನು, ಮೇಣಬತ್ತಿ, ಅಪರಿಚಿತರೇ?, ಮರಕ್ಕಾ ಒಂದೀಟ ಪರೀತಿ ಬೇಕs, ವಸುಂಧರಾ, ಹುಚ್ಚು, ಜನರೇನು ಬಲ್ಲರು ಒಳಗಾಗೊ ಕೃತ್ಯವ, ಹಿಂಬಡದ ಗಾಯ ಎಂಬ ಕಥೆಗಳಿವೆ. ಈಚಿನ ಕಥೆಗಳು(1997-2011) ಕಥೆ ಸಂಕಲನದಲ್ಲಿ ಪ್ರೀತಿ ಪ್ರೇಮ, ಸಂಸಾರ ಇತ್ಯಾದಿ, ಚೊಕ್ಕ ಬಂಗಾರ, ಮಾಧುರಿ ಪರಿಣಯ, ನನಗೂ ಒಂದು ಸೀಟು, ಭೂತ, ಶ್ರದ್ಧಾಂಜಲಿ, ಇಳಸುಳಿಗಳು, ದೂರದ ಮನೆ, ಬೆಳಗು ಬೈಗಿನ ಆಟ, ಅಚ್ಚ ಪರಿಮಳ, ನಿರಾಳ, ಗೂಡಿನೊಳಗೊಂದು ಹಕ್ಕಿ, ಸಂಗೀತ, ಹಂಡೆ ಮುರಿಗೆವ್ವ, ಸುರಪುರದ ಸಾಧ್ವಿ, ಆಪತ್ಬಂಧು ಎಂಬ ಕತೆಗಳಿವೆ.
©2024 Book Brahma Private Limited.