ಖ್ಯಾತ ಕಥೆಗಾರ ಕರೀಗೌಡ ಬೀಚನಹಳ್ಳಿ ಅವರ ಸಮಗ್ರ ಕಥೆಗಳ ಕೃತಿ-ಹೊತ್ತಿನ ಕಣ್ಣಿನ ಮಿಂಚು. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ. ಇವರ ಕತೆಗಳಲ್ಲಿ ಪುರುಷಾಧಿಕ್ಯ ಅಲ್ಲಲ್ಲಿ ಕಂಡು ಬರುತ್ತದೆ; ಆದರೆ ಮೂಲಭೂತವಾಗಿ ಕಥೆಗಾರರದು ಸ್ತ್ರೀಪರ ದನಿಯಾಗಿದೆ. ಇಲ್ಲಿನ ಅವ್ವಂದಿರು, ಕೆಂಚಮ್ಮ, ನಂಜಕ್ಕ, ಹಂದಿ ಲಕ್ಕವ್ವ ಮುಂತಾದ ಸ್ತ್ರೀಪಾತ್ರಗಳು ಕಷ್ಟಜೀವಿಗಳು ಮತ್ತು ಸ್ವತಂತ್ರ ಪ್ರವೃತ್ತಿಯುಳ್ಳ ದಿಟ್ಟೆಯರು. ಹಾಗೆಯೇ ಹಳ್ಳಿಗಳಲ್ಲಿನ ಶಾಲಾ ಶಿಕ್ಷಣ ಕರೀಗೌಡರ ಮುಖ್ಯ ಕಾಳಜಿಗಳಲ್ಲೊಂದು. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಮೇಲ್ಜಾತಿ ಮತ್ತು ಮೇಲ್ವರ್ಗಗಳಲ್ಲದ ಹಿನ್ನೆಲೆಯಿಂದ ಬಂದವರ ವಿದ್ಯೆಯಗಳಿಕೆ ಅನೇಕ ಆಕಸ್ಮಿಕಗಳಿಂದಲೇ ಕೂಡಿರುತ್ತದೆ. ಇದಕ್ಕೆ ನಿಜ ಜೀವನದಿಂದಲೂ, ಸಾಹಿತ್ಯ ಕೃತಿಗಳಿಂದಲೂ ಅನೇಕ ಉದಾಹರಣೆಗಳನ್ನು ಕೊಡಬಹುದು. ಇಂಥ ಪರಿಸ್ಥಿತಿಯನ್ನು ಕರೀಗೌಡರು ತಮ್ಮ ಕೆಲವು ಕತೆಗಳಲ್ಲಿ ನಿರೂಪಿಸುತ್ತಾರೆ. ಹಾಗೆಯೇ ಶಾಲಾ ಶಿಕ್ಷಣದ ಎಡರು ತೊಡರುಗಳು, ಶಾಲೆಯ ಕಟ್ಟಡದ ಸ್ಥಿತಿ, ಮಾಸ್ತರುಗಳ ಮಾದರಿಗಳು ಈ ಕಥೆಗಳಲ್ಲಿ ಅನಾವರಣಗೊಳ್ಳುತ್ತದೆ.
ಇಲ್ಲಿನ ‘ಉಗುಳು’ ಎಂಬ ಕತೆಯಲ್ಲಿ ಮೇಲ್ಜಾತಿ ಜನರಿಗೆ ಹೊಲೆಯ ಪೂಜಾರಿ ಜಾತ್ರೆ ಸಂದರ್ಭದಲ್ಲಿ ಉಗುಳುವ ಆಚರಣೆ ಮೂಲಕ, ಈ ಸಮಸ್ಯೆಯ ಸಾಂಕೇತಿಕತೆಯನ್ನು ದಿನನಿತ್ಯದ ಬದುಕಿನಲ್ಲಿ ನಡೆಯುವ ವಾಸ್ತವ ಸಂಘರ್ಷವನ್ನು ಚಿತ್ರಿಸುತ್ತಾರೆ. ಇನ್ನೂ ‘ಆನೆ’ ಕತೆಯು ಭಿನ್ನವಾಗಿದ್ದು ಅಲಿಗರಿ ಶೈಲಿಯಲ್ಲಿ ಆನೆಯನ್ನು ಒಂದು ರೂಪಕವನ್ನಾಗಿಸಿ ದೇಶದ ಸಮಕಾಲೀನ ರಾಜಕೀಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ವಿಡಂಬಿಸಲು ಪ್ರಯತ್ನಪಡುವ ವಿಶಿಷ್ಟ ಕತೆಯಾಗಿದೆ.
©2024 Book Brahma Private Limited.