‘ಟಿ.ಆರ್. ರಾಧಾಕೃಷ್ಣರ ಎಲ್ಲಾ ಕತೆಗಳು’ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡ ಎಲ್ಲ ಲೇಖಕರ ಹಾದಿಯೂ ಇದೇ. ಸಾಫಲ್ಯದ ಸ್ತರಗಳು ಮಾತ್ರ ಅವರವರ ಪ್ರಾಪ್ತಿಯನ್ನು ಅನುಸರಿಸುತ್ತವೆ. ರಾಧಾಕೃಷ್ಣರ ಬಗ್ಗೆ ಮೊದಲು ಹೇಳಬೇಕಾದ ಮಾತೆಂದರೆ, ಅವರು ಸಾಹಿತ್ಯವನ್ನು, ಅತ್ಯಂತ ಗಂಭೀರವಾದ ಒಂದು ಮನಸ್ಸಿನ ವ್ಯಾಪಾರವೆಂದು ಗ್ರಹಿಸಿ, ಆ ಪ್ರಕ್ರಿಯೆಯಲ್ಲಿ ತಮಗೆ ಎಷ್ಟು ಸಾಧ್ಯವೋ ಅಷ್ಟನ್ನೂ ಸಾದಿಸಬೇಕೆಂದು ಶ್ರದ್ಧೆ ಮತ್ತು ಜವಾಬ್ದಾರಿಯಿಂದ ಹೆಣಗಾಡುವ ಲೇಖಕರಾಗಿದ್ದಾರೆ. ತಾವು ಕಂಡದ್ದು-ಉಂಡದ್ದು, ತಮ್ಮ ಸುತ್ತಲ ಪರಿಸರ, ಹೀಗೆ ತಮ್ಮ ಅನುಭವದ ಕಕ್ಷೆಗೆ ಬಂದ ಅಸಂಗತ-ಅಸಂಬದ್ಧ ಸಂಗತಿಗಳೆಲ್ಲವನ್ನೂ ತಮ್ಮೆದುರು ಹರಡಿಕೊಂಡು ಅವುಗಳ ನಡುವೆ ಇರಬಹುದಾದ ಆಂತರಿಕ ಸಂಬಂಧದ ಎಳೆಗಳನ್ನೋ ಅಥವಾ ಅವುಗಳ ವೈದ್ಯಶ್ಯವೇ ಎತ್ತಿಕೊಡಬಹುದಾದ ಅರ್ಥವನ್ನೋ, ಕಣ್ಣಲ್ಲಿ ಕಣ್ಣಿಟ್ಟು ಏಕಾಗ್ರಚಿತ್ತದಿಂದ ತಲೆಗೆ ಕೈ ಇಟ್ಟು ಯಾವುದೇ ವ್ಯಗ್ರತೆಗೆ ಒಳಗಾಗದೇ ಧ್ಯಾನದ ನೆಲೆಯಲ್ಲಿ ಹುಡುಕುವ ಕ್ರಿಯಾ ಪ್ರವೃತ್ತಿಯನ್ನು ಅವರಲ್ಲಿ ನೋಡುತ್ತೇವೆ. ರಾಧಾಕೃಷ್ಣರ ಹೆಚ್ಚಿನ ಕತೆಗಳು ಹೀಗೆ ಧ್ಯಾನದ ನೆಲೆಯಲ್ಲೇ ಹುಟ್ಟುವ ಕತೆಗಳಾಗಿವೆ.
©2025 Book Brahma Private Limited.