ಕಥೆ ಎಂಬ ಮಾತನ್ನು ಕೇಳುತ್ತಲೇ ನಮ್ಮ ಬಾಲ್ಯದ ಸವಿನೆನಪು ನಮ್ಮ ಕಣ್ಣಿಗೆ ಕಟ್ಟಿದಂತಾಗುತ್ತದೆ. ಮನೆಯಲ್ಲಿರುವ ಮುಪ್ಪಿನ ಅಜ್ಜಿಯನ್ನು ಬೇಡಿ, ಕಾಡಿ, ಜೇನಿನಂತಹ ಕಥೆಗಳನ್ನು ಆಕೆಯಿಂದ ಹಿಂಡಿ ಹೊರತೆಗೆಯದ ನಿರ್ಭಾಗ್ಯ, ಬಾಲ್ಯದ ಸುಖದಲ್ಲಿ ಬಹುಭಾಗದಿಂದ ವಂಚಿತನಾದಂತೆಯೇ ಸರಿ. ಅಜ್ಜಿಯನ್ನು ಪಡೆಯುವ ಭಾಗ್ಯವಿಲ್ಲದವನು ಹೊಸದಾಗಿ ಮನೆಗೆ ಬಂದ ಅತ್ತಿಗೆ ಯನ್ನು ಆಶ್ರಯಿಸಬಹುದು ; ರಾತ್ರಿಯವೇಳೆ ಒಬ್ಬಂಟಿಗಳಾಗಿ ಅಡುಗೆಯ ಮನೆಯನ್ನು ಸಾರಿಸುವಾಗಲೋ ಅಥವಾ ಕತ್ತಲೆಯಲ್ಲಿ ಮನೆಯ ಹೊರಗೆ ಮುಸುರೆಯನ್ನು ತಿಕ್ಕುವಾಗಲೋ, ಆಕೆ ತನ್ನ ಕುರುಡುಭಯದ ನಿವಾರಣೆಗಾಗಿ ಕಥೆಯ ಲಂಚವನ್ನಿತ್ತು ಎಳೆವರೆಯದ ಹುಡುಗನನ್ನು ತನ್ನ ಬಳಿಯಲ್ಲಿ ಇರಿಸಿಕೊಂಡಿರಬಹುದು. ಅದನ್ನು ನೆನೆದಾಗ ಅಂದಿನ ಆ ಸವಿ ಇಂದಿಗೂ ನಮ್ಮ ಬಾಯಲ್ಲಿ ನೀರೂರಿಸುತ್ತದೆ. ನಮ್ಮ ಲಾವಣಿ, ಹೆಣ್ಣು ಮಕ್ಕಳ ಹಾಡು ಗಳಂತೆ ಈ ಕಥೆಗಳೂ ನಮ್ಮ ಜಾನಪದ ಸಾಹಿತ್ಯದ ಭಂಡಾರದಲ್ಲಿನ ಅಮೂಲ್ಯ ರತ್ನಗಳು. ಶ್ರುತಿಗಳಂತೆ ಕಿವಿಯಿಂದ ಕಿವಿಗೆ ಹರಿದುಬಂದಿರುವ ಇವುಗಳ ಮೂಲ ಅಭೇದ್ಯ, ಅಸ್ಪಷ್ಟ ; ಬಹುಶಃ ಮಾನವಜೀವಿ ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ ಬೆತ್ತಲೆಯಾಗಿ ಬಯಲಿನಲ್ಲಿ ವಾಸಿಸುತ್ತಿದ್ದ ಕಾಲದಿಂದ ಹಿಡಿದು ಇಂದಿನವರೆಗೆ, ಕಾಲ ದೇಶಗಳ ಎಲ್ಲೆ ಯಿಲ್ಲದೆ, ಅವು ಬೆಳೆದುಬಂದಿರಬಹುದು. ಕಥನ ಕಲೆ ಹೇಗೆ ಹುಟ್ಟಿತು ? ಏಕೆ ಹುಟ್ಟಿತು ? ಹೇಗೆ ಹುಟ್ಟಿತೆಂಬುದನ್ನು ಸ್ವಲ್ಪಮಟ್ಟಿಗೆ ಊಹಿಸಬಹುದು. ಅದು ಮನುಷ್ಯ ಸ್ವಭಾವಕ್ಕೆ ಅಂಟಿಬಂದ ಒಂದು ಗುಣವಿಶೇಷವಿರಬೇಕು. ನಾಲ್ಕು ಜನ ಒಟ್ಟಿಗೆ ಸೇರಿ ಹರಟೆ ಹೊಡೆಯಲು ಆರಂಭಿಸಿದರೆ, ಅಲ್ಲಿ ಒಂದು ಕಥೆಗೆ ಬೀಜಾವಾಪನೆಯಾಗುತ್ತದೆಂದು ಹೇಳ ಬಹುದು. ಮಾತು ಬಲ್ಲವನು, ತಾನು ಕಂಡ ಅಥವಾ ಕೇಳಿದ ಒಂದು ವ್ಯಕ್ತಿ ಯನ್ನೋ ದೃಶ್ಯವನ್ನೋ ಕುರಿತು, ಕೇಳುವವರ ಹೃದಯಂಗಮವಾಗುವಂತೆ ವರ್ಣಿಸಿ ಹೇಳುತ್ತಾನೆ ; ಉಳಿದವರು ಅದನ್ನು ಮೈಮರೆತು ಆಲಿಸುತ್ತಾರೆ ಎನ್ನುತ್ತಾರೆ ಲೇಖಕ ಆನಂದ.
©2025 Book Brahma Private Limited.