"ನಿಲ್ಲು ನಿಲ್ಲೆ ಪಂತಂಗ.." ಕೇವಲ ಕಥಾ ಸಂಕಲನವಾಗಿ ನಮ್ಮನ್ನು ತಾಕುವುದಿಲ್ಲ. ಅದರಲ್ಲೊಂದು ಜತೆಜತೆಗೆ ಕರೆದೊಯ್ಯುವ ಮತ್ತು ಚಿತ್ರಣವನ್ನು ಚಿತ್ರವಾಗಿ ಬದಲಾಯಿಸುವ ಆಸ್ಥೆಯ ಕುಸುರಿ ಕೆಲಸದ, ಮನಸ್ಸಿಗೆ ಸರಕ್ಕನೆ ಒಮ್ಮೆ ತಾಕಿ ನಿಲ್ಲುವ ಗಟ್ಟಿ ಗುಣವಿದೆ. ಕತೆಗಳೆಂದರೆ ಸಂಗತಿಗಳನ್ನು ಜೀವಂತವಾಗಿ ನಮ್ಮೆದುರಿಗೆ ತೆರೆದಿಡುತ್ತಾ ಹಸಿ ಬಿಸಿ ಸತ್ಯಗಳನ್ನು ಬೆತ್ತಲು ಮಾಡುತ್ತಾ, ಇದೆಲ್ಲ ನಮಗೂ ಎಲ್ಲೊ ಕನೆಕ್ಟ್ ಆಗುವ ಗಾಢ ಪ್ರಕ್ರಿಯೆ. ಆ ನಿಟ್ಟಿನಲ್ಲಿ ಶೈಲಜಾ ಹಾಸನ ಗೆಲ್ಲುತ್ತಾರೆ. ಓದುಗನಾಗಿ ಕತೆಯಾಳಕ್ಕೆ ಒಯ್ಯುತ್ತಾ ನಮ್ಮ ನಿರೀಕ್ಷೆಗಳನ್ನು ಮತ್ತೊಂದು ದಿಕ್ಕಿಗೆ ತಿರುಗಿಸಿ ಸುಳ್ಳಾಗಿಸುವ, ಕೆಲವೊಮ್ಮೆ ಅದಕ್ಕೂ ಮಿರಿದ ತಿರುವು ಮತ್ತು ಫಲಿತಾಂಶ ನೀಡುವ ಕತೆಗಳನ್ನು ನಾಜೂಕಾಗಿ ಕಟ್ಟಿದ ಶೈಲಜಾ ಅವರು ಪಾತ್ರಗಳ ತಲ್ಲಣ, ವಿಷಾದ, ಅನುಸರಿಸುವಿಕೆ, ಮೌನ, ಆಂದೋಳನ, ಅವ್ಯಕ್ತ ನಿಜಾಯಿತಿಗಳನ್ನು ಬಿಚ್ಚಿಡುತ್ತಾ ವಾಸ್ತವ ಸತ್ಯಗಳಿಗೆ ಹತ್ತಿರವಾಗಿಸುತ್ತಾ ಸಾಗುವ ದಾರಿಯಲ್ಲಿ, ಪಾತ್ರಗಳು ಬಹುಶ: ಕತೆಗಾರ್ತಿಯ ಹಿಡಿತ ಮೀರಿ ಬೆಳೆದು ನಿಂತಿರುವ ಹೆಗ್ಗಳಿಕೆಯೂ ಇದೆ ಎನ್ನಿಸಿದೆ ಎನ್ನುತ್ತಾರೆ ಸಂತೋಷಕುಮಾರ ಮೆಹೆಂದಳೆ.
©2024 Book Brahma Private Limited.