‘ಯುದ್ಧಾನಂತರದ ಶಾಂತಿ’ಯನ್ನು ಭಿನ್ನವಾಗಿ ಕಟ್ಟಿಕೊಡುವ ಕೃತಿ ಲೇಖಕ ಚನ್ನಪ್ಪ ಕಟ್ಟಿ ಅವರ ‘ಯುದ್ಧ ಕಾಲದ ಹುಡುಗಿಯರು’. ಸಂಕಲನದ ಎಲ್ಲಾ ದೃಷ್ಟಿಯಿಂದಲೂ ಬಹಳ ಯಶಸ್ವಿಯಾದ ಕಥೆ ಇದಾಗಿದ್ದು, ನೈಜೀರಿಯಾದ ಅಂತರ್ಯುದ್ಧದ ನಂತರ ಬರೆಯಲಾಗಿರುವ ಈ ಕಥೆಯಲ್ಲಿ ದೇಶದಲ್ಲಿ ಹಾಳಾಗಿರುವ ಮೂಲಸೌಕರ್ಯ ಮತ್ತು ಆರ್ಥಿಕತೆಯನ್ನು ಅನಾವರಣಗೊಳಿಸುತ್ತಾ ಅಮಾಯಕ ಜೀವಗಳ ಸಾವು ಮತ್ತು ಜನರ ಶೋಚನೀಯ ಸನ್ನಿವೇಶಗಳನ್ನು ಸಾಂಕೇತಿಕವಾಗಿ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಯುದ್ಧದಲ್ಲಿ ಜೊನದನ್ ಮತ್ತು ಇವೆಗ್ಬು ದಂಪತಿಯ ಮನೆ, ಆಸ್ತಿ ಧ್ವಂಸವಾಗುತ್ತದೆ. ತನ್ನ ಮಗನನ್ನೂ ಕಳೆದುಕೊಂಡಿರುವ ಅವರು ಧ್ವಂಸಗೊಂಡ ತಮ್ಮ ಮನೆಯ ಅವಶೇಷಗಳ ಅಡಿಯಲ್ಲಿದ್ದ ಸೈಕಲ್ಲನ್ನು ತೆಗೆದು ರಿಪೇರಿ ಮಾಡಿ ಬಾಡಿಗೆ ಟ್ಯಾಕ್ಸಿಯನ್ನಾಗಿ ಪರಿವರ್ತಿಸಿ ಹಣ ಸಂಪಾದನೆ ಮಾಡಿ ಬದುಕನ್ನು ಕಟ್ಟಿಕೊಳ್ಳುವ ಬಗೆ ಇಲ್ಲಿದೆ. ‘ಯುದ್ಧಾ ನಂತರದ ಶಾಂತಿ’ ಶೀರ್ಷಿಕೆಯೇ ವ್ಯಂಗ್ಯದಿಂದ ಕೂಡಿದೆ. ಅಧಿಕಾರಿಗಳ ಅಸಮರ್ಥತೆ, ಹಿಂಸಾಚಾರ, ಅದರ ಪರಿಣಾಮಗಳನ್ನು ಚಿತ್ರಿಸುವ ಈ ಕಥೆಯಲ್ಲಿ ಬೈಸಿಕಲ್, ಭರವಸೆ ಮತ್ತು ಬದುಕನ್ನು ಪುನರ್ ರೂಪಿಸಿಕೊಳ್ಳುವ ಸಂಕೇತವಾಗಿ ಬರುತ್ತದೆ. ‘ನಥಿಂಗ್ ಪಜಲ್ಸ್ ಗಾಡ್’ ಎಂಬ ಪದ ಅನುರಣನಗೊಳ್ಳುತ್ತದೆ. ‘ಯುದ್ದ ಕಾಲದ ಹುಡುಗಿಯರು’ ಕಥೆಯಲ್ಲಿಯೂ ಯುದ್ಧದ ಪರಿಣಾಮಗಳು ತೀವ್ರವಾಗಿ ಚಿತ್ರಣಗೊಂಡಿವೆ.
©2024 Book Brahma Private Limited.