ದೇವಚಂದ್ರನ ವ್ಯುತ್ಪತ್ತಿ ಜ್ಞಾನ ಅಸಾಧಾರಣ; ಅವನ ಲೋಕಾನುಭವವಂತೂ ಮೈಜುಂದಟ್ಟಿಸುವಂತಿದೆ. ಅವನಿಗೆ ವೇದ, ವೇದಾಂತ, ಸಿದ್ಧಾಂತಗಳ ಪೂರ್ಣ ಪರಿಚಯವಿತ್ತು; ಷಟ್‌ದರ್ಶನಗಳಾದ ಕಾಣಾದ, ಮೀಮಾಂಸಕ, ಸಾಂಖ್ಯ, ಬೌದ್ಧ ಮತ್ತು ಚಾರ್ವಾಕ ಇವುಗಳ ತಾರ್ಕಿಕ ಲಯ ಗೊತ್ತಿತ್ತು.; ಚಂದ್ರಗುಪ್ರ ಮೌರ್ಯ ಮೊದಲುಗೊಂಡು ನಮ್ಮ ಮೈಸೂರು ಒಡೆಯರವರೆಗಿನ ರಾಜಾವಳೀ ಇತಿಹಾಸದ ಜ್ಞಾನವಿತ್ತು; ತುರುಕರು ಹಾಗೂ ಇಂಗರೇಜಿ ಆಡಳಿತಗಳನ್ನು ಆತ ಕಂಡುಂಡವನಾಗಿದ್ದ; ಹಾಗೆಯೇ ಹಿಂದೂ, ಮುಸಲ್ಮಾನ, ಕೈಸ್ತ, ಪಾರ್ಸಿ ಮುಂತಾದ ಮತಧರ್ಮಗಳ ಬಗ್ಗೆ ಆತನಿಗೆ ತಿಳಿದಿತ್ತು. ಸತ್ಯ, ಪ್ರೇಮ, ಕರುಣೆಗಳೇ ಪ್ರತಿಯೊಂದು ಧರ್ಮದ ಮೂಲ ಸೆಲೆಯಾಗಿರುವಾಗ ಪ್ರಪಂಚದಲ್ಲಿ ಇಷ್ಟೊಂದು ಮತ ಧರ್ಮಗಳು ಏಕೆ ಹುಟ್ಟಿಕೊಂಡವೋ ತಿಳಿಯದು. ಇವತ್ತು ಭಿನ್ನಮತೀಯ ನಾಯಕರು ಹೊಸ ಹೊಸ ಪಕ್ಷಗಳನ್ನು ಹುಟ್ಟಿಹಾಕಿದಂತೆ ಹಿಂದಿನ ಕಾಲದಲ್ಲಿ ಭಿನ್ನಮತೀಯ ಸಿದ್ಧಾಂತದ ಆಚಾರ್ಯರಿಂದ ಹೊಸ ಹೊಸ ಸುಧಾರಿತ ಮತಗಳು ಹುಟ್ಟಿಕೊಂಡವು. ಆದರೆ ಕಾಲಕ್ರಮೇಣ ಅವುಗಳಿಗೂ ಧರ್ಮಗ್ಲಾನಿ ಬಡಿದುಕೊಂಡು ಲೋಕೋದ್ಧಾರಕ್ಕೆ ಬದಲಾಗಿ ಲೋಕಕಂಟಕವೆನಿಸಿದವು. ಇದು ಧಾರ್ಮಿಕ ಇತಿಹಾಸ.
©2025 Book Brahma Private Limited.