ಕಣ್ಣಂಚಿನ ಕಿಟಕಿ ವಿನಯ ನಂದಿಹಾಳ ಅವರ ಕೃತಿಯಾಗಿದೆ. ಈ ಕೃತಿಯ ಲೇಖನಗಳನ್ನು ವಿಶಾಲವಾಗಿ ಮೂರು ಭಾಗಗಳಲ್ಲಿ ವಿಂಗಡಿಸಿ ನೋಡುವುದಾದರೆ, ಶಾಸನಗಳ ನಂತರ ಕನ್ನಡ ಸಾಹಿತ್ಯಕ್ಕೆ ಸ್ಪಷ್ಟ ಹೊಸ ದಾರಿಯನ್ನು ರೂಪಿಸಿದ್ದು ಜೈನ ಸಾಹಿತ್ಯ ಸೃಷ್ಟಿ. ಇದು ಬಹಳ ವಿಶಾಲವಾದ ಗುರುತಿಸುವಿಕೆಯಾಯಿತು. ಇನ್ನಷ್ಟು ನಿರ್ದಿಷ್ಟವಾಗಿ ಹೇಳುವುದಾದರೆ, ವಿನಯ ಅವರಿಗೆ ಮಧ್ಯಯುಗದ ಜೈನಸಾಹಿತ್ಯ, ಅದರಲ್ಲೂ ‘ವಡ್ಡಾರಾಧನೆ’ ಪ್ರಸ್ತಾವಿಸ ಹೊರಟಿರುವ ಮೌಲ್ಯಗಳ ನಿಷ್ಕರ್ಷೆಯನ್ನು ಮಾಡುವ ಲೇಖನಗಳು ಇಲ್ಲಿವೆ. ಆರಂಭಿಕ ತರುಣ ವಿಮರ್ಶಕ ಸರಿಯಾದ ದಾರಿಯಲ್ಲಿದ್ದಾರೆ ಎಂಬುದರ ಗುರುತಾಗಿ ವಿಷಯಗಳು ಕಂಗೋಳಿಸುತ್ತವೆ. ನಾನು ಓದಿನ ಅನುಕೂಲಕ್ಕಾಗಿ ಮಾಡಿಕೊಂಡ ಎರಡನೆಯ ವಿಭಾಗದಲ್ಲಿ ಸಮಕಾಲೀನ ಸಾಹಿತ್ಯದ ಚರ್ಚೆಗಳಿವೆ. ಕೆಲವು ವಿಸ್ತೃತವಾಗಿವೆ. ಇನ್ನು ಕೆಲವು ಹೊಳಹುಗಳನ್ನು ನೀಡಿ ಸಂವಾದ ಮುಂದುವರೆಸಬಹುದಾದ ಸಾಧ್ಯತೆಗಳಿಗೆ ಅವಕಾಶ ಒದಗಿಸಿಕೊಡುತ್ತವೆ. ಇಲ್ಲಿ ‘ಆ ಮನಿ’ ‘ರಸಗಂಗಾಧರ’ ನಾಟಕಗಳು; ‘ಅಕಥಾ ಕಥಾ’ ‘ಟೈಪಿಸ್ಟ್ ತಿರಸ್ಕರಿಸಿದ ಕತೆೆ” ಕಥಾ ಸಂಕಲನಗಳು ಮತ್ತು ‘ಕಾಮನ ಹುಣ್ಣಿಮೆ’ ‘ಹಾಣಾದಿ’ ಕಾದಂಬರಿಗಳು ಚರ್ಚೆಯಾಗಿವೆ. ಜಾಕ್ ಲಂಡನ್‌ನ ‘ಸ್ಕಾರ್ಲೆಟ್ ಪ್ಲೇಗ್’ ಮತ್ತು ಆಯನ್ ರ‍್ಯಾಂಡ್ ಅವರ ‘ದಿ ಫೌಂಟೇನ್‌ಹೆಡ್’ ಅನುವಾದಿತ ಕಾದಂಬರಿಗಳ ವಿಶ್ಲೇಷಣೆಗಳಿವೆ. ಮೂರನೆಯ ವಿಭಾಗದಲ್ಲಿ ಸುಮಾರು ಹನ್ನೆರಡು ಚಲನಚಿತ್ರಗಳ ವಿಮರ್ಶೆ, ವಿಶ್ಲೇಷಣೆ ಅಥವ ಮುಕ್ತ ಚರ್ಚೆಗಳಿವೆ. ಒಂದು ಸಾಹಿತ್ಯ ಸಮಾಜವನ್ನು ಆವರಿಸಿಕೊಂಡಿರುವ ವಿಷಯಗಳನ್ನು ಈ ಲೇಖನಗಳು ಹೊಂದಿರುವುದರಿಂದ ವಿಷಯ ವೈವಿಧ್ಯತೆ ಅತಿ ಸಹಜವಾಗಿ ಮೂಡಿಬಂದಿದೆ. ನಾವು ಗಮನಿಸಬೇಕಾದ ಅಂಶವೆಂದರೆ, ವಿನಯರ ಆಸಕ್ತಿಗಳು ಈ ವಿಷಯ ವೈವಿಧ್ಯತೆಯನ್ನು ರೂಪಿಸಿವೆ ಎನ್ನುತ್ತಾರೆ ಕೇಶವ ಮಳಗಿ.
©2024 Book Brahma Private Limited.