ಬಾಲ್ಯದ ನೆನಪುಗಳು ಬಂಗಾರದಂತಹವು ಎಲ್ಲರೂ ಹೇಳುವುದುಂಟು. ಬಾಲ್ಯದ ನೆನಪುಗಳು ಹುದುಗಿರುತ್ತವೆ. ಅವುಗಳ ಆಪ್ತ ಮತ್ತು ಬೆಚ್ಚನೆಯ ಭಾಗ ಆಗಾಗ ಕಾಡುತ್ತಿರುತ್ತವೆ. ಆದರೆ ಅಂತಹ ನೆನಪುಗಳನ್ನು ಮನದಾಳದಿಂದ ಹೆಕ್ಕಿ ತೆಗೆದು, ಅಕ್ಷರ ರೂಪ ಕೊಡುವುದು ಒಂದು ಕೌಶಲ, ಕಲೆ, ಅಂತಹ ಕೆಲಸವನ್ನು ನಾಗರೇಖಾ ಗಾಂವಕರ ಅವರು 'ಬಣ್ಣದ ಕೊಡೆ' ಸಂಕಲನದಲ್ಲಿ ಮಾಡಿದ್ದಾರೆ. ಕರಾವಳಿಯ ಹಳ್ಳಿಯೊಂದರಲ್ಲಿ ಕಳೆದ ಬಾಲ್ಯದ ಅನುಭವಗಳನ್ನು ಆಯ್ತು, ಸರಳವಾಗಿ ರೂಪಿಸಿ, ಇಲ್ಲಿ ಸಂಕಲಿಸಿದ್ದಾರೆ. ಮಕ್ಕಳ ಬಾಲ್ಯದ ಅನುಭವಗಳ ಜತೆಯಲ್ಲೇ ಹಿಂದೆ ಗ್ರಾಮೀಣ ಜನರಲ್ಲಿ ಇದ್ದ ಬಾಂಧವ್ಯ, ವಿಶ್ವಾಸಗಳು ಈ ಬರಹಗಳಲ್ಲಿ ಬಿಂಬಿತವಾಗಿವೆ. 'ಮೀನು ಮಾರುವ ಹರಿಕಂತ್ರ, ಮಾದೇವಿ ಮತ್ತವಳ ಟೀಮು ಬೇಸಿಗೆಗಾಲಕ್ಕೆ ಒಣ ಮೀನು ಮಾರಲು ನಮ್ಮೂರಿಗೆ ಬರುತ್ತಿದ್ದರು. ಪೇಟೆಯಿಂದ 15 ಕಿ.ಮಿ.ಯಷ್ಟು ದೂರದಲ್ಲಿರುವ ನಮ್ಮೂರಿಗೆ ಬರುವುದೆಂದರೆ ಆ ಕಾಲಕ್ಕೆ ಸಾಹಸವೇ ಆಗಿತ್ತು. ಅವರುಗಳು ಬಂದವರೇ ಮೊದಲು ಬರುತ್ತಿದ್ದುದು ನಮ್ಮ ಮನೆಗೆ, ನಮ್ಮಮ್ಮ ತನಗೆ ಬೇಕಾದ ಮೀನುಗಳನ್ನೆಲ್ಲಾ ಖರೀದಿಸುತ್ತಿದ್ದರು. ನಮ್ಮಲ್ಲಿಯೇ ಉಳಿದ ಬುಟ್ಟಿಗಳನ್ನೆಲ್ಲಾ ಇಟ್ಟು ಊರಿಗೆಲ್ಲಾ ಮೀನು ಮಾರಲು ಹೋಗುತ್ತಿದ್ದರು. ಮರಳಿ ಮಧ್ಯಾಹ್ನ ನಮ್ಮನೆಯಲ್ಲಿಯೇ ಅವರ ಊಟೋಪಚಾರ. ಅದಕ್ಕೆ ಪ್ರತಿಯಾಗಿ ಮನೆಯ ಯಾವುದಾದರೂ ಕೃಷಿ ಕೆಲಸದಲ್ಲಿ ಬೇಡವೆಂದರೂ ತಾವಾಗಿಯೇ ನನ್ನಮ್ಮನಿಗೆ ಸಹಾಯ ಮಾಡುವ ಹೊಂದಾಣಿಕೆ ಸಹಕಾರ ಇತ್ತು.' (ಪುಟ 55) ಇಂತಹ ಹಲವು ಬರಹಗಳನ್ನು ಒಳಗೊಂಡ 'ಬಣ್ಣದ ಕೊಡೆ'ಯ ಓದು ಆಪ್ತ ಎನಿಸುತ್ತದೆ.
©2025 Book Brahma Private Limited.