‘ಚೂರು ಚಂದ್ರ ಮೂರು ಕಿರಣ’ ಸಿಂಧುಚಂದ್ರ ಹೆಗಡೆ ಅವರ ರಚನೆಯ ಕಥಾಸಂಕಲನವಾಗಿದೆ. ಕತೆ ಮತ್ತು ಪ್ರಬಂಧ- ಈ ಎರಡೂ ಪ್ರಕಾರಗಳನ್ನೂ ಬೆಸೆದಂಥ ಕಥನ ಕ್ರಮ ಇದು. ಕೇವಲ ಕತೆ ಹೇಳುವವನಿಗೆ ಒಂದು ನಿಚ್ಚಳವಾದ ಗುರಿಯಿರುತ್ತದೆ. ಅಂಥ ಕತೆಗಾರರು ತಾವು ಸೃಷ್ಟಿಸಿದ ಪಾತ್ರವನ್ನು ಬೆನ್ನಟ್ಟುತ್ತಾ ಹೋಗುತ್ತಾರೆ. ಆ ಹುರುಪಿನಲ್ಲಿ, ತೀವ್ರತೆಯಲ್ಲಿ ಸುತ್ತಲಿನ ಪರಿಸರವನ್ನು ನೋಡುವುದನ್ನು ಮರೆಯುತ್ತಾರೆ. ಪ್ರಬಂಧಕಾರನಿಗೆ ಪಾತ್ರದ ಹಂಗಿಲ್ಲ. ಅದು ಬರೀ ಸುತ್ತಾಡುವ ಲಹರಿ. ಸಿಂಧುಚಂದ್ರ ಏಕಕಾಲಕ್ಕೆ ಎರಡೂ ಕೆಲಸವನ್ನೂ ಮಾಡಬೇಕಾಗಿದೆ. ಅದನ್ನು ಅವರು ಮುಚ್ಚಟೆಯಿಂದ ಮಾಡಿದ್ದಾರೆ ಕೂಡ. ಹನ್ನೆರಡು ಕತೆಗಳ ಈ ಸಂಕಲನದಲ್ಲಿ ವೈವಿಧ್ಯವಿದೆ. ಹುಡುಕಾಟವಿದೆ, ಸಿಂಧುಚಂದ್ರ ಏಕಾಂತದಲ್ಲಿ ಕಟ್ಟುತ್ತಾ ಹೋದ ಕತೆಗಳಲ್ಲಿ ಅವರ ಮನಸ್ಸು ಕತೆಯೊಳಗೆ ಮುಳುಗಿ ಏಳುವುದನ್ನು ನೋಡುತ್ತೇವೆ. ಕೆಲವು ಕತೆಗಳು ಎಷ್ಟು ಓದಿದರೂ ಮುಗಿಯುವುದಿಲ್ಲ, ಕೆಲವು ಕತೆಗಳು ಮುಗಿದ ನಂತರವೂ ಮುಂದುವರಿಯುತ್ತವೆ. ಇನ್ನು ಕೆಲವು ಕತೆಗಳು ಮುಗಿದ ನಂತರ ಶುರುವಾಗುತ್ತವೆ. ಹೀಗಾಗಿ ಈ ಕತೆಗಳನ್ನು ಸಿಂಧುಚಂದ್ರ ಅವರ ಪ್ರಯೋಗಶೀಲತೆಯ ಫಲ ಎಂದು ಕರೆಯಬಹುದು. ಇಂಥ ಉತ್ಕಟವಾದ ಕಥನಪ್ರೀತಿ ಮತ್ತು ಬಿಡುಬೀಸಾಗಿ ಬರೆಯುವ ಹುರುಪು- ಇದರಾಚೆಗೂ ಕತೆಗಳು ಮತ್ತೇನನ್ನೋ ಬಯಸುತ್ತಾ ಕಾದುಕೂತಿರುತ್ತದೆ ಎಂಬುದನ್ನು ಸಿಂಧುಚಂದ್ರ ಅರ್ಥಮಾಡಿಕೊಂಡಂತೆ ಕತೆಯಿಂದ ಕತೆಗೆ ಬೆಳೆಯುತ್ತಾ ಸಾಗಿದ್ದಾರೆ ಎನ್ನುತ್ತಾರೆ ಜೋಗಿ (ಗಿರೀಶ್ ರಾವ್ ಹತ್ವಾರ್) .
©2025 Book Brahma Private Limited.