‘ಮಹಾಪ್ರಸ್ಥಾನ ದಲಿತ ಸಂವೇದಿ ಕಥೆಗಳು’ ಕೃತಿಯು ಕೇಶವರೆಡ್ಡಿ ಹಂದ್ರಾಳ ಅವರ ಕಥಾಸಂಕಲನವಾಗಿದೆ. ಈ ಸಂಕಲನದ ಬಹುತೇಕ ಕಥೆಗಳು ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ಬರೆದಂತಹ ಕಥೆಗಳಾಗಿವೆ ಎನ್ನುತ್ತಾರೆ ಇಲ್ಲಿ ಲೇಖಕ ಕೇಶವರೆಡ್ಡಿ ಹಂದ್ರಾಳ. ಭಾರತದ ಅಂದಿನ ಸಂದರ್ಭದ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಕೇಶವರೆಡ್ಡಿ ಹಂದ್ರಾಳರು ತಮ್ಮ ಕಥೆಗಳಲ್ಲಿ ಅತ್ಯಂತ ದಟ್ಟವಾಗಿ ಅನಾವರಣಗೊಳಿಸಿದ್ದಾರೆ. ದಲಿತ ಸಮುದಾಯದ ಬಡತನ, ಹಸಿವು, ದುಃಖ- ದುಮ್ಮಾನಗಳ ಕರಾಳ ಮುಖಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಭಾರತದ ಸಾಮಾನ್ಯ ಜನರ ಬದುಕಿನ ಅರಣ್ಯರೋಧನವನ್ನು ಬಟಾಬಯಲು ಮಾಡುತ್ತಾರೆ. ಹಾಗೆಯೇ ಇಲ್ಲಿ ಬಳಸಿಕೊಂಡಿರುವ ಭಾಷೆ ಕೂಡ ಇಡೀ ಭಾರತದ ಹಳ್ಳಿಗಾಡಿನ ಸೊಗಡನ್ನು ಮೈಮೆತ್ತಿಕೊಂಡು ಸಂಬಂಧ ಮತ್ತು ಸಂವೇದನೆಗಳ ನಡುವೆ ಒಂದು ಉದಾತ್ತವಾದ ಸೇತುವೆಯನ್ನೇ ನಿರ್ಮಿಸಿಬಿಡುತ್ತದೆ. ಈ ಕೃತಿಯಲ್ಲಿ ಒಟ್ಟು 15 ಕತೆಗಳಾದ, ಮಹಾಪ್ರಸ್ಥಾನ, ದಮನ, ಗಾಂಧಿ, ಒಡಲ ಕಡಲಿನ ವಿಷದ ಅಲೆಗಳು, ಡಾಕ್ಟರ್ ಹುಲಿಗೆಪ್ಪನ ಸ್ಕೂಟರ್ ಲೋನು, ಪೀತ್ಲನ ಪಟಾಕಿ ಪರ್ವ, ಹಿಮದ ಗೋಪುರಕೆ ಹಚ್ಚುವೆನು ಬಣ್ಣ, ವ್ರಣ, ತಿಪ್ಲನಿಗೆ ವಕ್ಕರಿಸಿದ ಲಾಟರಿ ಮಾರಿ, ಭೂಗೋಳ, ಚಹರೆ, ವರ್ಣಭೇದ, ಪ್ರಜಾಪ್ರಭುತ್ವದ ಕ್ಷಣಗಳು, ಗ್ಯಾಂಗ್ ರೇಪ್, ಜಾಗೃತಿಯನ್ನು ಒಳಗೊಂಡಿದೆ.
©2025 Book Brahma Private Limited.