"ನಾಜನೀನ್" ಕಥೆಯಲ್ಲಿ ಅಕ್ಬರ್ ನನ್ನು ಪ್ರೀತಿಸಿ ಮದುವೆಯಾಗುವ ನಾಜನೀನ್ ತವರಿನಿಂದ ತಿರಸ್ಕೃತಳಾಗಿ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡರೂ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು, ಅತ್ತೆಯ ಸಹಾಯದಿಂದ ಓದು ಮುಂದುವರೆಸಿ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾಳೆ, "ಪ್ರೀತಿಯೇ ಗೆದ್ದಿತು" ಕಥೆಯ ರೇಶ್ಮಾ ಕಾರಣಾಂತರಗಳಿಂದ ಪ್ರೀತಿಸಿದವನನ್ನು ಬಿಟ್ಟು ಇನ್ನೊಬ್ಬನನ್ನು ಮದುವೆಯಾದರೂ ಆತನೊಟ್ಟಿಗೆ ಬಾಳಲಾಗದೇ ಧೈರ್ಯದಿಂದ ಆ ಸಂಬಂಧದಿಂದ ಹೊರಬಂದು ತಾನು ಪ್ರೀತಿಸಿದವನನ್ನೇ ಮದುವೆಯಾಗುತ್ತಾಳೆ, "ಲಂಗಡೀ" ಕಥೆಯ ಶಮೀನಾ ಪೋಲಿಯೋದಿಂದ ಕಾಲು ಕಳೆದುಕೊಂಡರೂ ಸೇವಾ ಸಂಸ್ಥೆಯೊಂದರ ಸಹಾಯದಿಂದ ತನ್ನ ಬದುಕು ಕಟ್ಡಿಕೊಳ್ಳುತ್ತಾಳೆ, ಹೀಗೆ ನೂರ್ ಜಹಾನ್ ರ ಕಥೆಗಳಲ್ಲಿ ಮುಸ್ಲಿಂ ಮಹಿಳಾಲೋಕದ ಅನಾವರಣವಿದ್ದರೂ ವೈವಿಧ್ಯತೆಯಿದೆ, ಮಹಿಳೆಯರ ಶೋಷಣೆ, ದಾರುಣತೆಗಳನ್ನಲ್ಲದೇ ಅವರ ಧೈರ್ಯ, ಸಮಚಿತ್ತ, ದಿಟ್ಟತನಗಳನ್ನೂ ಅವರ ಕಥೆಗಳು ಕಂಡರಿಸುತ್ತವೆ, ಮನೆಯ ಹಿತ್ತಲಲ್ಲಿ ಕುಳಿತ ಮಹಿಳೆಯರು ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವಂತೆ ಇವರ ಕಥೆಗಳಿವೆ,ಕಲಾತ್ಮಕತೆಯ ಕೊರತೆ ಕಂಡುಬಂದರೂ "ಹೆಣ್ಣುಮಕ್ಕಳ ಕಿಲ ಕಿಲ ನಗು, ಮುದುಕಿಯರ ಜೋಗುಳದ ಹಾಡುಗಳ ನಡುವೆ, ಜೋಗುಳಕ್ಕೆ ಕಟ್ಟಿದ ಹೂವಿನ ಮಾಲೆಯಲ್ಲಿ ಒಂದು ಹೂವಿನಂತೆ ಮಲಗಿತ್ತು ಪುಟ್ಟದೊಂದು ಹೂವು(ಮುಂತಾಜ್) ಎಂಬ ವಾಕ್ಯಗಳು ಗಮನ ಸೆಳೆಯುತ್ತವೆ, ಬೇಗ ಬೇಗ ಕಥೆ ಹೇಳಿಬಿಡಬೇಕೆಂಬ ಧಾವಂತದಲ್ಲಿ ಕಲಾತ್ಮಕತೆ ಸೊರಗುತ್ತದೆ, ನೂರ್ ಜಹಾನ್ ರು ಧ್ಯಾನಸ್ಥ ಮನಸ್ಥಿತಿಯನ್ನು ರೂಢಿಸಿಕೊಂಡರೆ ಅವರ ಕಥೆಗಳು ಕಲಾತ್ಮಕತೆಯ ಸೊಬಗಿನಿಂದ ಕಂಗೊಳಿಸಬಹುದು, ಒಟ್ಟಿನಲ್ಲಿ ಹೈದ್ರಾಬಾದ್-ಕರ್ನಾಟದ ಸಣ್ಣ ಕಥಾಧಾರೆಗೆ ಮುಸ್ಲಿಂ ಮಹಿಳಾ ಸಂವೇದನೆಯ ಕಿರುತೊರೆಯ ಸೇರ್ಪಡೆಯಾಗಿ ಇಲ್ಲಿಯ ಕಥೆಗಳು ಪರಿಗಣಿಸಬಹುದಾಗಿದೆ ಎನ್ನುತ್ತಾರೆ ವನಮಾಲಾ ಕಟ್ಟೇಗೌಡರ್.
©2025 Book Brahma Private Limited.