‘ಕಾತಚಿ ಸಮಗ್ರ ಕಥಾ ಸಂಪುಟ’ ಕೃತಿಯು ಕಾತ ಚಿಕ್ಕಣ್ಣ ಅವರ ಸಮಗ್ರ ಕಥಾ ಸಂಕಲನವಾಗಿದೆ. ಈ ಸಮಗ್ರ ಸಂಪುಟದಲ್ಲಿ ‘ಬಿಳಲು ಬಿಟ್ಟಬದುಕು’, ‘ಅಗಾಂತರ’, ‘ಒಡಲುಮರಿ’, ‘ಮನಸು ಮುಗಿಲು’, ‘ವಾಸನಾಮಯ ಬದುಕಿನ ಆಚೆ ಈಚೆ’, ‘ಮೋಡ ನೆರಳನಿರಾಳ’ ಮತ್ತು ‘ಮಾಗಿ ಕೋಗಿಲೆಯ ಮೌನ’ ಸೇರಿದಂತೆ ಎಂಟು ಕಥಾ ಸಂಕಲನಗಳ ಒಟ್ಟು 75 ಕತೆಗಳಿವೆ. ತೀರ ಸಾಮಾನ್ಯವಾದುದನ್ನು ಕಥೆ ಮಾಡುವಂತಹ ಕಲೆ ಕತೆಗಾರರಿಗೆ ಸಿದ್ದಿಸಿದೆ ಎಂಬುವುದನ್ನು ಇಲ್ಲಿನ ಕತೆಗಳ ಮುಖೇನ ಕಾಣಬಹುದು. ಹಳ್ಳಿಯ ಸೊಗಡಿನಿಂದ ಹಿಡಿದು ಪಟ್ಟಣದ ದೈನಂದಿನ ಬದುಕಿನ ಕುರಿತಂತಹ ಕತೆಗಳು ಇಲ್ಲಿ ಪಕ್ವತೆಯನ್ನು ಪಡೆದಿದ್ದು, ಕಥಾ ವಸ್ತುಗಳು ಭಿನ್ನವಾಗಿ ಮೂಡಿಬಂದಿದೆ. ಕತೆಗಾರ ಕೃತಿಯಲ್ಲಿ ನಿನ್ನೆಯ ಜಗತ್ತಿನ ಪ್ರಾಮುಖ್ಯತೆಯನ್ನು ಕೂಡ ಕಥನ ರೂಪದಲ್ಲಿ ಪ್ರಮುಖವೆಂದು ತಿಳಿಸಿದ್ದಾರೆ. ಅವರೇ ಇಲ್ಲಿ ಹೇಳುವಂತೆ; ಪ್ರಾಯಃ ಇವತ್ತು ನಿಂತು ನಿನ್ನೆಗಳತ್ತ ಹಿಂದಿರುಗಿ ನೋಡಿದರೆ, ನನ್ನ ಕಥಾ ಜಗತ್ತು ಕಾಳಮ್ಮನ ಕೊಪ್ಪಲು, ಭಾವ ಜಗತ್ತು ಬಾಲ್ಯ ಎಂದೆನ್ನಿಸುತ್ತದೆ. ಬದುಕಿನ ಎಲ್ಲ ರಂಗದ ಅನುಭವಗಳನ್ನು ಅಥವಾ ಘಟನೆಯೊಂದನ್ನು ಸುಲಭವಾಗಿ ಒಳಗೊಳ್ಳುವಂಥ, ಹೇಳುವಂಥ, ಸರಳತೆ ಕಥಾ ಪ್ರಕಾರಕ್ಕೆ ಇರುವುದು ದಿಟ. ಇದು ಕಾರಣವಾಗಿಯೇ ನಮ್ಮಲ್ಲಿ ಕತೆಗಳ ಸಮೃದ್ಧ ಸೃಷ್ಟಿಗೆ ಕಾರಣವಿರಬಹುದು ಎಂದು ತಿಳಿಸಿದ್ದಾರೆ.
©2025 Book Brahma Private Limited.