ನಾಡೋಜ ಡಾ. ಸಾರಾ ಅಬೂಬಕ್ಕರ್ ಅವರು ಬರೆದ ಸಮಗ್ರ ಕಥೆಗಳ ಸರಣಿ ಕೃತಿಯಾಗಿದೆ. ಸಾಮಾಜಿಕ ವ್ಯವಸ್ಥೆಯನ್ನು ವಿಶೇಷವಾಗಿ ಮುಸ್ಲಿಂ ಸಾಮಾಜಿಕತೆಯನ್ನು ಪ್ರಶ್ನಿಸಿ, ಈ ವ್ಯವಸ್ಥೆಯು ಪುರುಷ ಪರವಿದೆ. ಸ್ತ್ರೀ ಶೋಷಣೆ ಮಾಡುತ್ತದೆ. ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂಬ ಧ್ವನಿ ಇದೆ. ವಸ್ತು ವೈವಿಧ್ಯತೆಯ ಕಥೆಗಳು ಇಲ್ಲಿ ಸಂಕಲನಗೊಂಡಿವೆ. ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ನಿರೂಪಣಾ ಶೈಲಿ,, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳು ಓದುಗರನ್ನು ಸೆಳೆಯುತ್ತವೆ.
(ಹೊಸತು, ಮಾರ್ಚ್ 2014, ಪುಸ್ತಕದ ಪರಿಚಯ)
ಶ್ರೀಮತಿ ಸಾರಾ ಅಬೂಬಕ್ಕರ್ ಅವರ ಬರಹಗಳಲ್ಲಿ - ಕಥೆಗಳಲ್ಲಿ ಕೌಟುಂಬಿಕ ಚಿತ್ರಣಗಳು ಹೇರಳವಾಗಿರುತ್ತವೆ. ಸಂಬಂಧಗಳು ಪರಸ್ಪರ ವ್ಯಕ್ತಿಗಳಿಗೆ ಅರಿವಿಲ್ಲದಂತೆ ಗಾಢವಾಗಿರುತ್ತವೆ. ಮತಧಾರ್ಮಿಕ ಸಂಪ್ರದಾಯಗಳು – ನಂಬಿಕೆಗಳು ಆಯಾ ಸಮುದಾಯದ ಜನರ ವ್ಯಕ್ತಿಗತ ಬದುಕಿನ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತವೆ. ಅಷ್ಟೇ ಅಲ್ಲ – ತನ್ನ ಪಾಡಿಗೆ ತಾನಿರಲೂ ಸಮಾಜ ಬಿಡುವುದಿಲ್ಲ. ಸ್ವಾತಂತ್ರ್ಯ ಎಷ್ಟೋ ಜನರಿಗೆ ಸ್ಟೇಚ್ಛೆಯಾಗಿರುತ್ತದೆ. ಇಲ್ಲಿರುವ ಕಥೆಗಳು ಅನಾಗರಿಕ, ತಿಳಿವಳಿಕೆಯಿಲ್ಲದ ಅಥವಾ ಮುಗ್ಧರ ಕಥೆಗಳಲ್ಲ. ಸಿರಿವಂತರ-ಕಪಟಿಗಳ ದರ್ಪದ ನಡುವೆ ನಿರ್ಗತಿಕರಿಗೆ – ಅಮಾಯಕರಿಗೆ ಬದುಕಲೂ ಅವಕಾಶವಿಲ್ಲದಂಥ ಸತ್ಯವನ್ನು ಇವು ಬೆತ್ತಲಾಗಿಸುತ್ತವೆ. ಹೆಚ್ಚಿನ ಕಥೆಗಳಲ್ಲಿ ನೇರವಾಗಿ ಬಲಿಪಶುವಾಗುವುದು ಹೆಣ್ಣು ! ಆದರೆ ಹೆಣ್ಣನ್ನು ಶೋಷಿಸಲು ಎಷ್ಟೋ ಸಲ ಹೆಣ್ಣೆ ಮುಂದಾಗುವುದು ಕೂಡ ವ್ಯವಸ್ಥೆಯ ಒಂದು ಕುರೂಪ, ಆಕೆ ಎಷ್ಟೇ ವಿದ್ಯಾವಂತೆಯಾದರೂ ಹೊರನೋಟಕ್ಕೆ ತುಂಬ ಸುಖಿಯೆಂದು ಇತರರಿಗೆ ಕಂಡುಬಂದರೂ ಆಕೆಯ ಒಳಬೇಗುದಿಗಳು ಮಾತ್ರ ಅವಳವೇ ಆಗಿರುತ್ತವೆ. ಆಕೆ ಅಸೂಯಾಪರಳು ಎಂಬ ಮಾತೂ ಕೂಡ ಸರ್ವೆಸಾಮಾನ್ಯ. ಮೇಲ್ನೋಟಕ್ಕೆ ಒಂದು ಮನೆಯ ಕೌಟುಂಬಿಕ ಕಥೆಯಂತೆ ಚಿತ್ರಿತವಾದರೂ ಒಂದರ ಹಿಂದೊಂದರಂತೆ ಇಡೀ ವ್ಯವಸ್ಥೆಯ ಆಳ - ಅಗಲ ಒಳನೋಟಗಳು ತೆರೆಯುತ್ತಾ ಹೋಗುವ ಗುಣ ಸಾರಾ ಅವರ ಕಥೆಗಳಿಗಿದೆ. ಒಬ್ಬರ ಬಾಳಿನಲ್ಲಿ ಇನ್ನೊಬ್ಬರ ಹಸ್ತಕ್ಷೇಪ ಕೆಲವೊಮ್ಮೆ ಢಾಳಾಗಿಯೇ ಕಣ್ಣಿಗೆ ರಾಚಿದಂತಿದ್ದರೆ ಮತ್ತೊಮ್ಮೆ ಕಂಡೂ ಕಾಣದಂತಿರುತ್ತದೆ. ಒಟ್ಟಿನಲ್ಲಿ ಸಮಾಜಕ್ಕೆ ಸವಾಲೆಸೆಯುವ ಕಥೆಗಳಿವು.
©2024 Book Brahma Private Limited.