`ಭರತದ ಮದ್ಯಾಹ್ನ' ಚಿಂತಾಮಣಿ ಕೊಡ್ಲುಕೆರೆ ಅವರ ಕೃತಿಯಾಗಿದೆ. ಕುತೂಹಲಕಾರಿಯಾದ ಆರಂಭ, ಆವಾಹಿಸಿಕೊಳ್ಳುವ ತಿರುವುಗಳ ಈ ಕಥೆಗಳ ಓಘವು ಸದ್ದಿಲ್ಲದೆ ಹರಿವ ನದಿಯಂತಿದೆ. ವಸ್ತುವಿನಲ್ಲಿ ಬಹುಪಾಲು ಆತ್ಮಕಥಾನಕವೂ, ನಿರ್ವಹಣಾಶೈಲಿಯಲ್ಲಿ ಏಕರೇಖಾತ್ಮಕವೂ ಆಗಿರುವ ಇವುಗಳ ಹೊರ ಆವರಣವನ್ನು ಕೌಟುಂಬಿಕ-ಸಾಮಾಜಿಕ ಸಂಗತಿಗಳು ರೂಪಿಸಿದ್ದರೆ; ಆಂತರ್ಯವನ್ನು ಮಾತ್ರ ಮಾನವತಾವಾದಕ್ಕೆ ಬದ್ಧವಾದ ಆಧ್ಯಾತ್ಮಿಕ ಅಂಶಗಳು ರೂಪಿಸಿವೆ. ಲೌಕಿಕ-ಅಲೌಕಿಕಗಳನ್ನು ಸಮಾನಾಂತರವಾಗಿ ಸ್ಪರ್ಶಿಸುತ್ತಲೇ, ಓದುಗನನ್ನು ಒಂದು ಆರೋಗ್ಯಪೂರ್ಣ ಮನಃಸ್ಥಿತಿಗಾಗಿ ಸನ್ನದ್ಧಗೊಳಿಸುತ್ತಾರೆ. ಕಥೆಯಲ್ಲದ, ಕಥೆಯಿಲ್ಲದ ಕೆಲವು ಕಥೆಗಳೂ ಕೂಡ ಬದುಕಿನ ಕುರಿತಾಗಿ ಅವು ಪ್ರಕಟಿಸುತ್ತಿರುವ ಕೃತಜ್ಞತಾಪೂರ್ವಕವಾದ ಸಂತೃಪ್ತಿಯ ಮೂಲಕ ಅನುಸರಣಾತ್ಮಕವಾದ ವ್ಯಕ್ತಿತ್ವದ ಮಾದರಿಗಳ ಮೂಲಕ, ಈ ಎಲ್ಲ ಕಥೆಗಳಲ್ಲಿ ಗುಪ್ತಗಾಮಿನಿಯಾಗಿ ಹರಿದಿರುವ ದೇವರ ಮೂಲಕ ಗಹನವಾದ ಜೀವನಪಾಠಗಳನ್ನು ದಾಟಿಸುವ ಕ್ರಮವು ತಂಗಾಳಿಯ ಅನುಭವವನ್ನು ನೀಡುವಂತಿದೆ. ಹೆಸ್ಮಾಸ್ತರರ ಅಚಲನಿಷ್ಠೆಯ ಕಾಯಕದಲ್ಲಿ, ಕೇಶಮಳ್ಳನ ಭೋಳೆತನದ ಸಹಜಿಕೆಯಲ್ಲಿ ಹಾಗೂ ಶ್ರೀನಿವಾಸನ ಮುಗ್ಧ ಭಕ್ತಿಯಲ್ಲಿ ಅಂತರ್ಗತವಾಗಿರುವ ದೇವರು ತಾನೇ ಸ್ವತಃ 'ನನ್ನ ಪೂಜೆಗಿಂತ ಕಾಯಕ ದೊಡ್ಡದು' ಎಂಬ ಸಂದೇಶ ನೀಡುತ್ತಿರುವುದು ಧ್ವನಿಪೂರ್ಣವಾಗಿದೆ. 'ಸಿಟ್ಟು-ಸಮಾಧಾನ ಎರಡನ್ನೂ ಪ್ರಯೋಗಿಸಿ ವಿದ್ಯಾರ್ಥಿಯನ್ನು ತಿದ್ದುವ ಮಾಸ್ತರ'ನಂತೆ ಈ ಬದುಕು, ಈ ನಂಬಿಕೆ, ಈ ದೇವರು- ಎಂಬುದನ್ನು ನಿಶ್ಯಬ್ದವಾಗಿ ದಾಟಿಸುತ್ತ, ನಮ್ಮೊಳಗನ್ನು ಬಗೆದು ನೋಡಿಕೊಳ್ಳುವಂತೆ ಮೆಲುದನಿಯಲ್ಲಿ, ಆದರೆ ಅಷ್ಟೇ ಪರಿಣಾಮಕಾರಿಯಾಗಿ ಈ ಕಥೆಗಳು ಒತ್ತಾಯಿಸುತ್ತಿವೆ. ಲೇಖಕ ಚಿದಾನಂದ ಸಾಲಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.