ಈ ಕಾದಂಬರಿಯ ಮುಖ್ಯ ಪಾತ್ರವಾದ ಸುಬ್ರಾಯ ನಾಯ್ಕ ಎನ್ನುವ ವನಪಾಲಕರು, ಗಟ್ಟಿ ಮುಟ್ಟಾದ ದೇಹದಾರ್ಡ್ಯ ಹೊಂದಿದ ಅದ್ಭುತ ಸದೃಢ ವ್ಯಕ್ತಿತ್ವ ತಲೆಯ ಮೇಲಿನ ಸ್ವಲ್ಪ ಕೂದಲು ಉದುರಿದರು ಸಹ ಅದ್ಭುತ ನೋಟ, ಗತ್ತು, ಗಾಂಭೀರ್ಯ, ಧೈರ್ಯದಿಂದಲೇ ಅರಣ್ಯ ಇಲಾಖೆಯಲ್ಲಿ ಎಲ್ಲರಿಗೂ ಇಷ್ಟವಾಗುವ ನೇರ, ದಿಟ್ಟ ಮತ್ತು ಕಾಡಿನ ಪ್ರಾಮಾಣಿಕ ರಕ್ಷಕನೆಂದು ಹೆಸರು ಪಡೆದ ವ್ಯಕ್ತಿ. ಇಂಥ ಒಂದು ಘಟನೆಯ ಬಗ್ಗೆ ಎಷ್ಟು ಬರೆದರು ಸಾಲದು, ಅಷ್ಟು ರಹಸ್ಯಮಯ ಹಾಗೂ ಭೀಭತ್ಸ, ಎಷ್ಟು ವಸಂತಗಳು ಉರುಳಿದರು ಇನ್ನೂ ಸಹ ವನ್ಯ ಜೀವಿ ರಕ್ಷಕರಲ್ಲಿ ಆಗಾಗ ಚರ್ಚೆಗೆ ಬರುವ ಹಾಗೂ ವನ್ಯ ಪಾಲಕರಿಗೆ ಅದೊಂದು ನಿತ್ಯದ ಪಾಠದ ಹಾಗೆ ಬಿಂಬಿತವಾಗಿದೆ. ಆ ಘಟನೆಯ ಕುರಿತು ಸಂಪೂರ್ಣ ವಿವರವನ್ನು ಪುಸ್ತಕ ರೂಪದಲ್ಲಿ ಗೃಹಿಕ ಹಾಗೂ ಪ್ರಾಮಾಣಿಕ ನೋಟದ ಸಣ್ಣ ಎಳೆಯನ್ನು ಆಧಾರದಲ್ಲಿ ಇಟ್ಟುಕೊಂಡು ದಾಖಲಿಸುತ್ತಿದ್ದೇನೆ. ಕನ್ನಡ ಸಾರಸ್ವತ ಲೋಕದಲ್ಲಿ ವನ್ಯಜೀವಿಗಳ ಹಾಗೂ ವನಪಾಲಕರ ಬಗ್ಗೆ ಕಥೆ ಕಾದಂಬರಿಗಳು ಬಂದಿದ್ದು ವಿರಳಾತೀತ ವಿರಳ ಎಂದರೆ ತಪ್ಪಾಗಲಾರದು, ಅದನ್ನೆ ಆಧಾರವಾಗಿಟ್ಟುಕೊಂಡು ಕೆಲವು ಹೇಳಿಕೆಯ ಆಧಾರದ ಮೇಲೆ ಅತಿರಂಜನೀಯ ರೀತಿಯಲ್ಲಿ ಕಾಲ್ಪನಿಕತೆಯನ್ನು ಸೇರಿಸಿ ನನ್ನದೇ ಶೈಲಿಯಲ್ಲಿ ಓದುಗರನ್ನು ಹಿಡಿದಿಡುವ ಹಾಗೆ ಓದಿಸಿಕೊಂಡು ಹೋಗುವ ಪ್ರಯತ್ನ ಇದಾಗಿದ್ದು ಕೆಲವು ಪಾತ್ರಗಳನ್ನು ಕಾಲ್ಪನಿಕವಾಗಿ ಸೃಷ್ಟಿಸಿ ರಂಜನೆಗೆ ಚ್ಯುತಿ ಬರದಂತೆ ಬರೆಯುವ ಸಾಹಸಕ್ಕೆ ಕೈ ಹಾಕಿದ್ದೇನೆ, ಈ ಕಾದಂಬರಿಯ ನಿಗೂಢತೆಯನ್ನು ಸವಿಯುವ ಮತ್ತು ಯಾವ ಆಧಾರವನ್ನು ಪ್ರಾಮಾಣಿಕರಿಸದೆ ರಂಜನೆಯ ಸರಕಂತೆ ಓದಿ ನೋಡಿ. ಒಂದು ಕಾದಂಬರಿ ಮೈ ತಳೆಯುವಲ್ಲಿ ಬರಹಗಾರನ ಹಾಗೂ ಓದುಗನ ಮನಸ್ಥಿತಿ ಒಂದೆಡೆ ಆಗಿರಬೇಕೆಂದೆನಿಲ್ಲ. ಬರಹಗಾರನಿಗೆ ಕಾದಂಬರಿಯನ್ನು ಬರೆದು ಮುಗಿಸುವ ತವಕವಿದ್ದರೆ ಓದುಗನಿಗೆ ಅದರಲ್ಲಿರುವ ವಸ್ತು ಸ್ಥಿತಿಯ ಕುರಿತು ಓದಿ ತಿಳಿಯುವ ತವಕ ಇದ್ದಿದ್ದೆ. ಈ ತವಕವನ್ನೇ ಆಧಾರವಾಗಿಟ್ಟುಕೊಂಡು ಬರಹಗಾರನಿಗೆ ವಾಸ್ತವದ ಜೊತೆಗೆ ಕಾಲ್ಪನಿಕತೆಯನ್ನು ಸಮೀಕರಿಸಿ ರಂಜನೀಯವಾಗಿ ಕಾದಂಬರಿಯನ್ನು ಕಟ್ಟಿ ಕೊಡಬೇಕಾದ ಜವಬ್ದಾರಿ ಇರುತ್ತದೆ. ಅದನ್ನೇ ಈ ಪುಸ್ತಕದಲ್ಲಿ ನಾನು ಮಾಡಿದ್ದೇನೆ. ಪಾತ್ರಗಳೆಲ್ಲ ಸಾಂದರ್ಭಿಕವಾಗಿ ಸೃಷ್ಟಿಯಾಗಿದ್ದು ಇನ್ನು ಕೆಲವು ಕಾದಂಬರಿಯನ್ನು ಬೆಳೆಸುವ ದೃಷ್ಟಿಯಿಂದ ಕಥೆಗೆ ಪೂರಕವಾಗಿ ಜೋಡಿಸಿದ್ದು ಇದೆ. ಅದಕ್ಕೆ ನಾನು ಈ ಕಾದಂಬರಿಯನ್ನು ವಾಸ್ತವಿಕತೆಯನ್ನು ಹೊರತುಪಡಿಸಿ ಕಟ್ಟು ಕಥೆಗಳನ್ನು ಸೇರಿಸಿ ಬರೆದ ಕಾಲ್ಪನಿಕ ಕಾದಂಬರಿ ಎಂದು ಬರೆದುಕೊಂಡಿದ್ದೇನೆ ಎನ್ನುತ್ತಾರೆ ಲೇಖಕರು.
©2025 Book Brahma Private Limited.