ಲೇಖಕ ಗಿರಿಮನೆ ಶ್ಯಾಮರಾವ್ ಅವರ ಕಾದಂಬರಿ ಕೃತಿ ʻಕಾಡೊಳಗೆ 36 ಗಂಟೆಗಳುʼ. 16 ಭಾಗಗಳಾಗಿ ಬಂದ ಕೃತಿಯು ಮಲೆನಾಡಿನ ರೋಚಕ ಕತೆಗಳನ್ನು ಹೇಳುತ್ತದೆ. ಮಲೆನಾಡಿನ ಒಂದು ಭಾಗದಲ್ಲಿ ಡ್ರಗ್ಸ್ ಜಾಲದ ಹಿಂದೆ ಬಿದ್ದು ಗುರುತು ಪರಿಚಯವಿಲ್ಲದ ಒಬ್ಬನೊಂದಿಗೆ ಕಾಡಿನ ಅನುಭವವಿಲ್ಲದ ಯುವತಿಯೊಬ್ಬಳು ಅಕಸ್ಮಾತ್ತಾಗಿ ಪಶ್ಚಿಮಘಟ್ಟದ ಕಾಡೊಳಗೆ ಧುಮುಕುತ್ತಾಳೆ. ಮುಂದೆ ಅಲ್ಲೇ ಸುಮಾರು ಮೂವತ್ತಾರು ಗಂಟೆ ಜೀವ ಭಯದಿಂದ ಕಳೆಯುವ, ಆಕೆ ಎದುರಿಸುವ ವಿಲಕ್ಷಣ ಸನ್ನಿವೇಶಗಳನ್ನು ಕಾದಂಬರಿ ಹೇಳುತ್ತಾ ಹೋಗುತ್ತದೆ. ಆಕೆಯ ಜೊತೆಗಿರುವ ವ್ಯಕ್ತಿ ರಕ್ಷಕನಾಗಿ ಬಂದು ಭಕ್ಷಕನಾದರೆ ಎಂಬ ಆಲೋಚನೆಗಳು ತಲೆ ಹತ್ತುತ್ತಿದ್ದಂತೆಯೇ ಆತ ಯಾರು? ಆತನ ಉದ್ದೇಶ ಏನು? ಎಂಬ ಸಂಶಯ ಮೂಡುತ್ತದೆ. ಹೀಗೆ ಸತ್ಯ ತಿಳಿಯುವವರೆಗೂ ಕತೆ ನಿಗೂಢವಾಗಿಯೇ ಕೊನೆವರೆಗೂ ಸಾಗುತ್ತದೆ. ಜೊತೆಗೆ ಪಶ್ಚಿಮಘಟ್ಟ ಎನ್ನುವ ಲೋಕ, ಅಲ್ಲಿ ವಿನಾ ಕಾರಣ ಅಭಿವೃದ್ದಿ ಹೆಸರಿನಲ್ಲಿ ನಡೆಸುವ ಮಾನವ ಕಾರ್ಯಚರಣೆಗಳು, ಅದು ಪ್ರಕೃತಿ ಮೇಲೆ ಬೀರುವ ಹಾನಿಯನ್ನೂ ಲೇಖಕರು ಈ ಮೂಲಕ ಚಿತ್ರಿಸಿದ್ದಾರೆ.
ಪುಸ್ತಕದ ಬಗ್ಗೆ ಲೇಖಕರು ಹೇಳುವಂತೆ, ಈ ಕಾದಂಬರಿಯ ವಸ್ತು ಮಾತ್ರ ಕಾಲ್ಪನಿಕ. ಉಳಿದಂತೆ ಅಲ್ಲಿನ ಪರಿಸರ, ಪ್ರಕೃತಿಗೆ ಸಂಬಂಧಪಟ್ಟ ವಿವರಣೆಗಳೆಲ್ಲಾ ವಾಸ್ತವ. ಇದು ಮಲೆನಾಡಿನ ರೋಚಕತೆಗಳ ಸರಣಿಯ ಹದಿಮೂರನೇ ಭಾಗ. ಸರಣಿ ಮುಂದುವರಿಯುತ್ತಲೇ ಇದೆ.
©2024 Book Brahma Private Limited.