ಓದುಗರನ್ನು ಆವರಿಸಿಕೊಳ್ಳುವಂಥ ಗುಣ ಕಥೆಗಳಿಗೆ ದಕ್ಕಬೇಕಾದರೆ ಕಥೆಗಾರ ಹಲವು ಅನುಭವಗಳಿಗೆ ಈಡಾಗಬೇಕಾಗುತ್ತದೆ, ಎಷ್ಟೋ ಸಂದರ್ಭಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಕೆಲವೊಮ್ಮೆ ತಾನೇ ಪಾತ್ರವಾಗಬೇಕಾಗುತ್ತದೆ, ಕಷ್ಟವನ್ನು, ಕೆಡುಕುಗಳನ್ನು ನೋಡಬೇಕಾಗುತ್ತದೆ. ಅನುಭವಿಸಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಮರೆಯಲ್ಲಿ ನಿಂತ ನಿರೂಪಕನಂತೆ ಕಥೆ ಹೇಳಬೇಕಾಗುತ್ತದೆ. ಇದೆಲ್ಲವನ್ನು ವಿನಾಯಕ ಅರಳಸುರಳಿ ಅವರು ಅನುಭವಿಸಿದ್ದಾರೆ ಅದರ ಪರಿಣಾಮ ಈ ಸಂಕಲನದ ಕಥೆಗಳಲ್ಲಿ ಡಾಳಾಗಿ ಕಾಣಿಸುತ್ತದೆ. ಒಂದೊಂದು ಕಥೆಯನ್ನು ಓದಿ ಮುಗಿಸಿದಾಗಲೂ, ಇಂಥದೇ ಪ್ರಸಂಗ ಅಲ್ಲೆಲ್ಲೋ ನಡೆದಿತ್ತಲ್ಲವಾ ಎಂದು ಯೋಚಿಸುವಂತಾಗುತ್ತದೆ. ಹತ್ತು ಕಥೆಗಳ ಈ ಸಂಕಲನದಲ್ಲಿ ಮನುಷ್ಯನ ಅಹಮಿಕೆ, ಅನುಮಾನ, ದರ್ಪ, ಅಸಹಾಯಕತೆ, ತಣ್ಣಗಿನ ಕ್ರೌರ್ಯ, ತಲೆಮಾರು ಕಳೆದರೂ ತಣಿಯದ ದ್ವೇಷ, ಮತ್ತೊಬ್ಬರ ಏಳಿಗೆಯನ್ನು ಕಂಡಾಗ ಇದ್ದಕ್ಕಿದ್ದಂತೆ ಉಂಟಾಗುವ ಅಸಹನೆ, ಪದೇ ಪದೇ ಸುಳ್ಳಾಗಿ ಹೋಗುವ ನಿರೀಕ್ಷೆಗಳು, ಯಾರಿಗೂ ಕಾಯದೆ ಹೋಗಿ ಬಿಡುವ ಪ್ರಾಣ.. ಹೀಗೆ ಮನುಷ್ಯನ ಮಿತಿಗಳಿಗೆ ಪುರಾವೆ ಒದಗಿಸುವ ಪ್ರಸಂಗಗಳು ಎಲ್ಲಾ ಕಡೆಗಳಲ್ಲೂ ಬರುತ್ತವೆ. ಪ್ರತಿಯೊಂದು ಕಥೆಯೂ ತನ್ನದೇ ರೀತಿಯಲ್ಲಿ ಮುಗಿದು ಲೈಫು ಇಷ್ಟೇನೇ! ಎಂದು ಪಿಸುಗುಟ್ಟಿದಂತೆ ಭಾಸವಾಗುತ್ತದೆ ಎಂದು ಮಣಿಕಾಂತ್ ಎ.ಆರ್. ಬೆನ್ನುಡಿಯಲ್ಲಿ ಬರೆದಿದ್ದಾರೆ.
©2025 Book Brahma Private Limited.