ಸುದೇಶ ದೊಡ್ಡಪಾಳ್ಯ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ದೊಡ್ಡಪಾಳ್ಯ ಗ್ರಾಮದವರು. ಇವರದು ಕೃಷಿಕ ಕುಟುಂಬ. ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಮೈಸೂರಿನಿಂದ ಪ್ರಕಟವಾಗುವ ‘ಆಂದೋಲನ’ ದಿನಪತ್ರಿಕೆಯಲ್ಲಿ 18 ತಿಂಗಳು ಉಪ ಸಂಪಾದಕ/ವರದಿಗಾರನಾಗಿ ಕೆಲಸ. ಬಳಿಕ ಪ್ರಜಾವಾಣಿ ಸೇರ್ಪಡೆ. ಬೆಂಗಳೂರು ಕಚೇರಿಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ. ಸಿನಿಮಾ ಆಸಕ್ತಿಯ ಕ್ಷೇತ್ರವಾಗಿದ್ದು, ಸಿನಿಮಾ ಪುರವಣಿಗೆ ಲೇಖನಗಳನ್ನು ಬರೆದಿದ್ದಾರೆ. ವಿಜಯಪುರ ಜಿಲ್ಲಾ ವರದಿಗಾರ, ಮೈಸೂರಿನಲ್ಲಿ ಹಿರಿಯ ವರದಿಗಾರ, ಕಲಬುರಗಿ ಬ್ಯೂರೊ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಕಲಬುರಗಿಯಲ್ಲಿದ್ದಾಗ ಹದಿನೈದು ದಿನಗಳಿಗೊಮ್ಮೆ ‘ಈಶಾನ್ಯ ದಿಕ್ಕಿನಿಂದ’ ಅಂಕಣ ಬರೆಯುತ್ತಿದ್ದರು. ಅದೇ ಹೆಸರಿನ ಸಂಕಲನ ಪ್ರಕಟವಾಗಿದೆ.
ಇವರು ಇಪ್ಪತ್ತೈದು ವರ್ಷಗಳಲ್ಲಿ ಬರೆದ ವಿಭಿನ್ನ ಬರಹಗಳ ಕಟ್ಟು ‘ಹಂಗರಹಳ್ಳಿಯ ಬರ್ಬರ ಸಂಕೋಲೆಗಳು’ ಪುಸ್ತಕವಾಗಿದೆ. ಪ್ರೇಮಕಥನಗಳ ಸರಣಿ ‘ಒಲವು ನಮ್ಮ ಬದುಕು’ ಮೂರನೆಯ ಮುದ್ರಣ ಕಂಡಿದೆ.
ಈಗ ಪ್ರಜಾವಾಣಿಯ ಬೆಂಗಳೂರು ಕಚೇರಿಯಲ್ಲಿ ಸುದ್ದಿ ಸಂಪಾದಕರಾಗಿದ್ದಾರೆ.
ಕೃತಿಗಳು: ಈಶಾನ್ಯ ದಿಕ್ಕಿನಿಂದ, ‘ಒಲವು ನಮ್ಮ ಬದುಕು’, ಹಂಗರಹಳ್ಳಿಯ ಬರ್ಬರ ಸಂಕೋಲೆಗಳು