ಸುಪ್ತಸಾಗರ ಸಾಗರದಾಳವನ್ನೂ.. ತನ್ನಲ್ಲಿ ಅವಿತಿರುವ ಮುತ್ತು, ರತ್ನಗಳನ್ನೂ, ಮೊಸಳೆ, ತಿಮಿಂಗಲಗಳನ್ನೂ ತೆರೆದು ತೋರಿಸುತ್ತದೆ. ಮನದ ಪದರಗಳಲ್ಲಿ ಪಸರಿಸುವ ಭಾವನೆಗಳಾದ ಪ್ರೀತಿ, ಪ್ರೇಮ, ವಾತ್ಸಲ್ಯ, ಈರ್ಷೆ, ದ್ವೇಷ ಎಲ್ಲವೂ ಎಳೆಎಳೆಯಾಗಿ ವ್ಯಕ್ತವಾಗಿ ಕಥೆಗಳೆಂಬ ವಸ್ತ್ರಗಳನ್ನು ನೇಯುತ್ತವೆ. ಇವು ವಾಸ್ತವಕ್ಕೆ ಹತ್ತಿರವಾಗಿದ್ದು ನಮ್ಮ ಸುತ್ತಲೂ ನಡೆಯುವ ಘಟನೆಗಳೋ ಎನಿಸುವಷ್ಟು ಜೀವಂತ ಚಿತ್ರಣ ಮೂಡಿಬಂದಿದೆ. ಪುರಾಣದ ಪಾತ್ರಗಳಿಗೂ ಮಾನವೀಯ ಸ್ಪರ್ಶ ಕೊಡುತ್ತ ನಮ್ಮೊಳಗೆ ಒಬ್ಬರಾಗುವಂತೆ ಮಾಡುತ್ತಾರೆ. ಹಳ್ಳಿಯ ಬದುಕು ಎಷ್ಟು ನೈಜವಾಗಿ ಅರಳಿದೆಯೊ ಅಷ್ಟೇ ಸಮರ್ಥವಾಗಿ ಮಹಾನಗರದ ಐ.ಟಿ. ಬದುಕನ್ನೂ.. ಅದರಲ್ಲಿನ ಒಳಸುಳಿಗಳನ್ನೂ ಲೇಖಕಿ ಕಟ್ಟಿಕೊಡುತ್ತಾರೆ. “ಕಿಲುಬು ಹಿಡಿದ ವ್ಯವಸ್ಥೆಗೆ..ಸಮಾಜಕ್ಕೆ ಕಲಾಯಿ ಮಾಡುವವರು ಬೇಕಾಗಿದ್ದಾರೆ" ಎಂಬ ವಾಕ್ಯ ಸಮರ್ಥನೀಯವಾದದ್ದು. ಉಡಿಯಲ್ಲಿ ಕೆಂಡವನ್ನೇ ಕಟ್ಟಿಕೊಂಡರೂ ತಣಿಸಿ ಬಾಳು ಹಸನಾಗಿಸುವ ಹೆಣ್ಣು ಜೀವನದಿಗಳು ಇಲ್ಲಿ ಪಾತ್ರಗಳಾಗಿವೆ. ಮಾಯದ ಗಾಯಗಳನ್ನು ಮುಚ್ಚಿಟ್ಟು ಬದುಕಲು ಹವಣಿಸುತ್ತವೆಯೇ ಹೊರತು ಬದುಕನ್ನು ಪರಕೀಯವಾಗಿಸಿಲ್ಲ. 'ಈ ಸಮಾಜ ನಮ್ಮನ್ನು ತಮ್ಮಿಷ್ಟದಂತೆ ಬಾಳಿಸುತ್ತದೆ.. ನಮ್ಮಿಷ್ಟದಂತಲ್ಲ' ಎನ್ನುವ ಮಾತು ಸತ್ಯ. ಹಿಂದುಳಿದವರಾದರೂ ಪರವಾಗಿಲ್ಲ. ನೆಮ್ಮದಿ ಮುಖ್ಯವೆಂಬ ಮಾತು ಸರ್ವವಿದಿತ.. ಬೆನ್ನುಡಿಗಾಗಿ ಪ್ರಕಾಶಕರು ಬರೆದ ಸಾಲುಗಳು.
©2024 Book Brahma Private Limited.