ಶ್ರೀಧರ ಬಳಗಾರ ಅವರು ನಲವತ್ತು ವರ್ಷಗಳಿಂದ ಮಲೆನಾಡ ಒಡಲಲ್ಲಿರುವ ಕುಟುಂಬಗಳ ಕತೆಗಳನ್ನು ನಿರೂಪಿಸುತ್ತ ಬಂದಿದ್ದಾರೆ. ಕತೆಗಳು ಕತೆಗಾರರನ್ನು ಮಾಗಿಸುತ್ತ, ತಾವೂ ಮಾಗುತ್ತ ಓದುಗರ ಕೈ ಸೇರುತ್ತಿವೆ. ಕಥೆಗಾರ ಈಗ ಕಥೆಗಳನ್ನು ಹುಡುಕುವುದಿಲ್ಲ ಅವು ಕಥೆಗಾರನ ಬಳಿ ಬಂದು ಸುಮ್ಮನೆ ನಿಲ್ಲುತ್ತವೆ. ಸದ್ದು ಮಾಡದೆ ತಾವಾಗಿಯೇ ಬಳಿ ಬಂದು ನಿಲ್ಲುವ ಕತೆಗಳಿಗೆ ಸದ್ದಿಲ್ಲದ ನುಡಿ ನಿರೂಪಣೆಯ ಸಹಜ ಚಂದ ಕಲ್ಪಿಸುವ ಕಸುಬು ಕತೆಗಾರನಿಗೆ ಸಿದ್ಧಿಸಿದೆ. ಹೆಣ್ಣಿರಲಿ ಗಂಡಿರಲಿ; ವಯಸ್ಸು ಹಿರಿದೋ ಕಿರಿದೋ ಅವರಿಗೆ ಒದಗುವ ಬದುಕಿನ ಖುಷಿಯಿರಲಿ ಆತಂಕ ತಲ್ಲಣಗಳಿರಲಿ ಅವುಗಳನ್ನು ಹೊತ್ತವರ ಹೊರೆ ಭಾರವಾದಾಗ ವಿಶ್ವಾಸದಿಂದಲೇ ತಮ್ಮ ನಂಬಿಕೊಂಡು ದೈವಗಳ ಮುಂದಿರಿಸಿ ನಿರಾಳತನದಲ್ಲಿ ಬೆತ್ತಲಾಗುತ್ತವೆ, ಸಂಶಯವಿಲ್ಲದ ನಿಲುವಿನಲ್ಲಿ. ಇಲ್ಲಿ ಸುಮ್ಮನೆ; ಅಲ್ಲಿ ನಮ್ಮ ಮನೆ ಎಂಬ ನಿಲುವು ಮಾತ್ರ ಇವರಲ್ಲಿ ಕಾಣುವುದಿಲ್ಲ. ಇಲ್ಲಿಯ ಮನೆಯೂ ಸುಮ್ಮನಲ್ಲ ಎಂಬುದು ಇಲ್ಲಿನ ಹೆಣ್ಣು ಗಂಡುಗಳ ಅಚಲ ವಿಶ್ವಾಸವೇ ಆಗಿದೆ. ಕಥೆಗಾರನ ಸಂತ ತತ್ವದ ಹಿರಿಮೆಯಿದು. ಮನುಷ್ಯನಿಗೆ ಸುಸ್ಥಿರ ಬಾಳ್ವೆ ಎಂಬುದು ಹಿಂದೆಯೂ ಇರಲಿಲ್ಲ; ಈಗಲೂ ಇಲ್ಲ; ಮುಂದೆಯೂ ಇರಲಾರದು. ನೆಲದ ಬದುಕಿನಲ್ಲಿ ಕೇಡು-ಒಳಿತು ಒಟ್ಟೋಟ್ಟಿಗೇ ಇರುವುದರಿಂದ ಮನುಷ್ಯ ಬದುಕಿಗೊಂದು ಸವಾಲಿದ್ದೇ ಇರುತ್ತದೆ. ಈ ಸವಾಲನ್ನೇ ಸ್ವೀಕರಿಸಿ ಸಂಶಯವಿಲ್ಲದ ದೈವಗಳನ್ನು ನಂಬಿ ನೆಲೆ ಪಡೆಯುವ ಇಲ್ಲಿನ ಬಾಳೆ ಹಿರಿದಾಗಿ ಕಾಣುತ್ತದೆ. ಕಾಣಿಸುವ ಕಥೆಗಾರನ ಕಸುಬಿನಲ್ಲಿ ದೈವತ್ವ ಬೆರೆತು ನಿಂತಿದೆ ಎಂದು ಲೇಖಕ ಅಮರೇಶ ನುಗಡೋಣಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.