ಈ ಕಥಾ ಸಂಕಲನವು ಚರಿತ್ರೆಯಿಂದ ಹಿಡಿದು ಆಧುನಿಕ ಕಾಲದವರೆಗೆ ತನ್ನ ಹರವನ್ನು ಚಾಚುತ್ತದೆ. 'ನೇಹಲ್', 'ಪ್ರೀತಿಯೊಂದೆ ಸಾಲದು, 'ದೇಶ, ದೇಹ ವಿಭಜನೆ', 'ಮೌನ ಮಾಡಿದ ತಪ್ಪುಗಳು' ಈ ಕಥೆಗಳಲ್ಲಿ ಚರಿತ್ರೆಯ ದಾಖಲೆಯೂ ಇದೆ. ಸಮಕಾಲೀನ ಸಂದರ್ಭದ ಸಾಮಾಜಿಕ ಸಮಸ್ಯೆಯೂ ಇದೆ. ವಿಜಯನಗರದ ದೊರೆ ಹಾಗೂ ಮುಸ್ಲಿಂ ದೊರೆಗಳ ರಾಜಕೀಯ ಕುತಂತ್ರಕ್ಕೆ ಬಲಿಯಾದ ನೇಹಲ್ ತನ್ನ ಆತ್ಮಕಥೆಯನ್ನು ತುಂಬಾ ಹೃದಯಂಗಮವಾಗಿ ನಿವೇದಿಸಿಕೊಳ್ಳುವ ಪರಿ ಮಾರ್ಮಿಕವಾಗಿದೆ. ಇದು ಒಂದು ಆತ್ಮದ ದುರಂತ ಕಥೆ! ಹೆಣ್ಣಿನ ಶೋಷಣೆಯ ಸುತ್ತಲೂ ಹೆಣೆದು ಕೊಂಡ ರಾಜಕೀಯ ವಿದ್ಯಮಾನಗಳು ರೋಚಕವಾಗಿ, ಎಳೆ-ಎಳೆಯಾಗಿ ಬಿಚ್ಚಿಕೊಳ್ಳುವ ರೀತಿ ಅನನ್ಯವಾಗಿದೆ. ಕಥೆಯ ಅನನ್ಯತೆಯಿರುವುದೇ ಅದರ ನಿರೂಪಣಾ ದಾಟಿಯಲ್ಲಿ, ಕಥೆ ಕಟ್ಟುವ ವಿಧಾನವೂ ಸಶಕ್ತವಾಗಿದೆ. ಉಸಿರು ಬಿಗಿ ಹಿಡಿದು ಕೂತು ಚರಿತ್ರೆಯ ಸದ್ದನ್ನು ಆಲಿಸುವಂತಹ ಮೋಹಕ ಶೈಲಿಯಲ್ಲಿ ಕಥೆ ಸಾಗುತ್ತದೆ. ಹಿಂದೂ - ಮುಸ್ಲಿಂ ವೈವಾಹಿಕ ಸಂಬಂಧದ ಜಟಿಲತೆಯನ್ನು ಒಂದು ಕ್ಷಣ ನಿಂತು ಚಿಂತಿಸುವಂತೆ ಮಾಡುತ್ತದೆ. ಚರಿತ್ರೆಯ ರಾಜಕೀಯ, ಸಾಮಾಜಿಕ, ವಾಂಶಿಕ ಸಮಸ್ಯೆಗಳನ್ನು ಡಾ.ನೂಲಿ ತುಂಬಾ ನಿರ್ಲಿಪ್ತವಾಗಿ ಹೆಣೆಯುತ್ತಾರೆ ಎಂದು ಪ್ರೊ.ಚಂದ್ರಕಾಂತ ಪೋಕಳೆ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.