ಸುರೇಶ್ ಷಾ ಕುಟುಂಬದವರು ಗಾಂಧಿನಾಡಿನಿಂದ ಕನ್ನಡ ನಾಡಿಗೆ ಬಂದರು, ಕನ್ನಡಿಗರನ್ನು ಅಭಿಮಾನದಿಂದ ಅಪ್ಪಿದರು, ಅವರ ಮನಸ್ಸನ್ನು ಅಪಹರಿಸಿದರು. ಕರ್ನಾಟಕದ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮುಖ್ಯವಾಹಿನಿಯಲ್ಲಿ ಬೆರೆತರು. ತೆವಳುತ್ತಿದ್ದ ಪುಸ್ತಕೋದ್ಯಮವನ್ನು ಪುನರುಜ್ಜಿವಿಸಿದರಲ್ಲದೆ ಪುಸ್ತಕ ಸಂಸ್ಕೃತಿಗೆ ಕಾಯಕಲ್ಪವೆಸಗಿದರು. ಓದುಗರು, ಬರಹಗಾರರು, ಪ್ರಕಾಶಕರು, ಮಾರಾಟಗಾರರು-ಇವರೆಲ್ಲರನ್ನೂ ಒಗ್ಗೂಡಿಸುವ ಸುವರ್ಣ ಕೊಂಡಿಯಾದರು. ಅಂದು ಸುರೇಶ್ ಷಾರವರು ನೆಟ್ಟ ಪುಟ್ಟ ಪುಸ್ತಕ ಸಸಿ ಇಂದು 'ಸಪ್ನ ಬುಕ್ ಹೌಸ್' ಎಂಬ ತೋರ ಹೆಮ್ಮರವಾಗಿ ಬೆಳೆದಿದೆ, ಹಲವಾರು ಕೊಂಬೆ ರೆಂಬೆಗಳಿಂದ ಭವ್ಯವಾಗಿ ಕಂಗೊಳಿಸುತ್ತಿದೆ. ಎಲ್ಲ ಬಗೆಯ ಅಭಿರುಚಿಗಳನ್ನು ತಣಿಸುವ ಮೌಲಿಕ ಕೃತಿಗಳು ದೊರೆಯುವ ಪುಸ್ತಕ ದೇವಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ತಾರತಮ್ಯವಿರದ ಚೊಕ್ಕ ವ್ಯವಹಾರದಿಂದ ಸಪ್ನ ಬುಕ್ ಹೌಸ್ ಕನ್ನಡಿಗರ ಪ್ರೀತಿಯ ಪುಸ್ತಕ ಭಂಡಾರವೆನಿಸಿದೆ. ಸಪ್ನ ಬುಕ್ ಹೌಸ್‌ನ ನಾನಾ ಕೊಡುಗೆಗಳಲ್ಲಿ ಪ್ರಮುಖವಾದುದು ಕನ್ನಡ ರಾಜ್ಯೋತ್ಸವ ಆಚರಣೆಗೆ ನೀಡಿದ ದಿವ್ಯ ತಿರುವು. ನಾಡು ಸಡಗರದಿಂದ ಆಚರಿಸುವ ರಾಜ್ಯೋತ್ಸವವನ್ನು ಕನ್ನಡ ಪುಸ್ತಕೋತ್ಸವದ ಹಬ್ಬವನ್ನಾಗಿ ಪರಿವರ್ತಿಸಿದರು. ಈ ಬಗೆಯ ಅರ್ಥಪೂರ್ಣ ಹೊಸ ಮಾರ್ಗ ಪ್ರವರ್ತಕರಾದ ಹೆಮ್ಮೆಯ ಸಪ್ನ ಬುಕ್ ಹೌಸ್ ಬಳಗಕ್ಕೆ ಹೃತೂರ್ವಕ ಅಭಿನಂದನೆಗಳನ್ನು ತಿಳಿಸಲು ಖುಷಿ ಆಗುತ್ತದೆ. ನಾಡೋಜ ಪ್ರೊ. ಕಮಲಾ ಹಂಪನಾ
©2024 Book Brahma Private Limited.