ಆರು ದಶಕಗಳ ಕಾಲ ಸಣ್ಣಕತೆಯ ಪ್ರಕಾರದಲ್ಲಿ ತಮ್ಮ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡು ಬಂದಿರುವ ಬಲ್ಲಾಳರು ವಸ್ತುವೈವಿಧ್ಯದಲ್ಲಿ, ಅಭಿವ್ಯಕ್ತಿ ವಿಧಾನದಲ್ಲಿ ಕನ್ನಡ ಕಥಾ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆ ನೀಡಿದ್ದಾರೆ. ಪ್ರಗತಿಶೀಲ ಚಳವಳಯಿರಬಹುದು, ನವೋದಯ ಸಂಪ್ರದಾಯದ ರೀತಿಯಿರಬಹುದು, ನವ್ಯಪ್ರಜ್ಞೆಯ ಪ್ರಭಾವವಿರಬಹುದು- ಈ ಎಲ್ಲವನ್ನೂ ತಮ್ಮ ಸೃಜನಶೀಲ ಪಯಣದಲ್ಲಿ ಬಲ್ಲಾಳರು ಮುಖಾಮುಖಿಯಾಗಿದ್ದಾರೆ. ಆದರೆ ಯಾವ ಪಂಥದ ಜೊತೆಗೂ ತಮ್ಮನ್ನು ಅವರು ಸಮೀಕರಿಸಿಕೊಳ್ಳದೆ ’ಅನನ್ಯ’ವೆಂಬಂತೆ ಬರೆಯುತ್ತ ಬಂದಿದ್ದಾರೆ. ಕನ್ನಡ ವಿಮರ್ಶೆ ಈಗ ಬಲ್ಲಾಳರ ಕಥಾಸಾಹಿತ್ಯವನ್ನು ಸಮಗ್ರವಾಗಿ ಪರಿಶೀಲಿಸಬಹುದು. ಪ್ರಮುಖಧಾರೆಗಳಿಗಿಂತ ಭಿನ್ನವಾಗಿ ಬರೆದ ಬಲ್ಲಾಳರ ಬರವಣಿಗೆ ಕಥಾಸಾಹಿತ್ಯದ ವಿಭಿನ್ನ ಸಾಧ್ಯತೆಗಳನ್ನು ನಮಗೆ ಪರಿಚಯ ಮಾಡಿಕೊಡುತ್ತದೆ. ಕನ್ನಡ ಕಥಾ ಪರಂಪರೆಗೆ ವಿಶಿಷ್ಟಕೊಡುಗೆಯಾಗುವ ಶಕ್ತಿ ಪಡೆದಿದೆ. ದೈನಿಕಗಳ ಮೂಲಕವೇ ದಟ್ಟ ಅನುಭವ ಕಟ್ಟಿಕೊಡುವ ಇವರ ಕಥನಕ್ರಮ-ಕನ್ನಡ ಪರಂಪರೆಯಲ್ಲಿ ವಿಶಿಷ್ಟವಾದುದು. ಪ್ರಧಾನ ಧಾರೆಯ ಬರವಣಿಗೆಯಿಂದ ನಾವು ಪಡೆಯಬೇಕಾಗಿದ್ದನ್ನು ಗುರ್ತಿಸಿಕೊಂಡದ್ದಾಗಿದೆ. ಈಗ ಬಲ್ಲಾಳರಂತಹ ಭಿನ್ನಧಾರೆಯ ಲೇಖಕರ ಸಾಹಿತ್ಯದ ಅಧ್ಯಯನ ಅನೇಕ ಹೊಸ ಸಾಧ್ಯತೆಗಳನ್ನು ಕಾಣಿಸುತ್ತದೆ.
©2024 Book Brahma Private Limited.