ಲೇಖಕ ಎಂ.ಎಸ್.ಕೆ. ಪ್ರಭು ಅವರ ಕೃತಿ ʻಸಮಗ್ರ ಕತೆಗಳುʼ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಜಯಂತ ಕಾಯ್ಕಿಣಿ ಅವರು, “ಕನ್ನಡವೆಂಬ ಸಂವೇದನೆಯನ್ನು ಸೂಕ್ತವಾಗಿ ಒಗ್ಗಿಸಿ, ಹೊಸ ಕಿಟಕಿಗಳನ್ನು ದಯಪಾಲಿಸಿದ ಮಹತ್ವದ ಕತೆಗಾರ ಎಂ ಎಸ್.ಕೆ. ಪ್ರಭು ಅವರ ಕತೆಗಳನ್ನು ಓದದೇ, ನಮ್ಮ ಪಯಣ ಅಪೂರ್ಣ. ಅಪ್ಪಟ ಹೊಸದಾದ ಅಷ್ಟೇ ಸ್ಪಂದನಶೀಲವಾದ ಒಂದು ಆವರಣದಲ್ಲಿ ನಮಗೆ ಉಸಿರಾಟವನ್ನು ಕಲ್ಪಿಸಿಕೊಟ್ಟ ಪ್ರಭು ಅವರ ಕತೆಗಳನ್ನು ಕೇವಲ ʻಫ್ಯಾಂಟಸಿ' ಎಂದು ಕರೆದುಬಿಟ್ಟರೆ ಅಪಚಾರ ಮಾಡಿದಂತೆ, ಏಕೆಂದರೆ ಫ್ಯಾಂಟೆಸಿಗಿಂತ ಮಿಗಿಲಾದ ನಿಜ ಇನ್ನೆನಿದೆ? ಅನುಕ್ರಮಗಳ ಹಂಗಿಲ್ಲದೆ, ಭೌತಿಕ ಗಡಿಯಾರದ ಗುಂಗಿಲ್ಲದೆ ಶುದ್ದ ʻಕಲ್ಯಾಣದʼ ಆಲಾಪಗಳು ಇವು. ಮತ್ತು ಈ ಹೆಣಿಗೆಯ ಪ್ರತಿ ಎಳೆಗಳೂ, ಸಂಸಾರ ಸಾಗರದೊಳಗಿನ ಈಜಿನ ಅಲೆಗಳಿಂದಲೇ ಬಾಳ್ವೆಯ ಘನತೆಗಿನ ಸಮರ ಸಂಧಿಗಳಿಂದಲೇ ರೂಪು ತಾಳಿ ಬಂದಿವೆ. ಸತ್ಯಸಿಕ್ತವಾದ ʻಊಹಾಮೃಗʼವನ್ನು ಅವರು, ಯಾಗದ ಕುದುರೆಯಂತೆ ಬಿಟ್ಟುಬಿಟ್ಟಿದ್ದಾರೆ. ಇದ್ದ ಕೆಲಸ ಬದಿಗಿಟ್ಟು ಅದರ ಹಿಂದೆ ಓಡುವ ಅನನ್ಯ ದಿವ್ಯ ಆವಕಾಶ ಮಾತ್ರ ನಮ್ಮದು” ಎಂದು ಹೇಳಿದ್ದಾರೆ.
©2024 Book Brahma Private Limited.