ಲೇಖಕ ಶ್ರೀಕಾಂತ್ ಅವರ ಕೃತಿ ಸಮಗ್ರ ಕತೆಗಳು. ಈ ಕೃತಿಗೆ ಲೇಖಕ ಎಸ್. ದಿವಾಕರ್ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ’ಪಾತ್ರಸೃಷ್ಟಿಯಲ್ಲಿ ಕಂಡುಬರುವ ನಾಟಕೀಯತೆ, ರೂಪಕಗಳ ಮೂಲಕ ಅನಾವರಣಗೊಳ್ಳುವ ಹೆಣ್ಣಿನ ಮನಸ್ಸು, ಸಂಕೇತಗಳ ಮೂಲಕ ಪಡಿಮೂಡುವ ವಿವರಗಳು, ಭಾವಗೀತಾತ್ಮಕ ನಿರೂಪಣೆ, ಇವು ಇಲ್ಲಿನ ಒಂದೊಂದು ಕತೆಯಲ್ಲೂ ಎದ್ದುಕಾಣುತ್ತವೆ... ಶ್ರೀಕಾಂತರ ಕತೆಗಳಲ್ಲಿ ಕ್ರೌರ್ಯದ ಬಗ್ಗೆ ದ್ವೇಷವಿದೆ, ಹೆಣ್ಣಿನ ಬಗ್ಗೆ ಅನುಕಂಪಭರಿತ ತಿಳುವಳಿಕೆಯಿದೆ. ಮನುಷ್ಯನ ಅಪ್ರಜ್ಞಾಪೂರ್ವಕ ವರ್ತನೆಗಳನ್ನು ಕುರಿತ ಸೂಕ್ಷ್ಮ ಗ್ರಹಿಕೆಯಿದೆ, ಜೀವಂತವಲ್ಲದ ಪ್ರಕೃತಿಯ ಬಗ್ಗೆ ಅನಾಸಕ್ತಿಯಿದೆ, ಒಳತು ಮತ್ತು ಕಡುಕಿನ ನಡುವಣ ಸಂಬಂಧದ ಬಗ್ಗೆ ಅಪಾರ ಕುತೂಹಲವಿದೆ. ಇವೆಲ್ಲವೂ ಶರತ್ತಾಲದ ಬದಲಾಗುವ ಬಣ್ಣಗಳಂತ ಭಾವನೆಗಳ ರೂಪಾಂತರಕ್ಕೆ ಕಾರಣವಾಗುತ್ತವೆ. ಸಾಮಾನ್ಯರ ಬಗೆಗೆ ಬರೆಯುವ ಅವರು ಮನುಷ್ಯನಲ್ಲ ಅಂತರ್ಗತವಾಗಿದ್ದು ಅಷ್ಟೇನೂ ಮುಖ್ಯವಲ್ಲದ ಸಂದರ್ಭಗಳಲ್ಲಿ ಮಾತ್ರ ಮೇಲೆ ಕಾಣಿಸಿಕೊಳ್ಳುವ ಹಿಂಸಾತ್ಮಕ ಪ್ರವೃತ್ತಿಯನ್ನು ವಿಶೇಷವಾಗಿ ವಿಶ್ಲೇಷಿಸುತ್ತಾರೆ- ಎಸ್. ದಿವಾಕರ್.
ಬಾಳಿನ ವಿವಿಧ ಮುಖಗಳ ಚಿತ್ರಣಕ್ಕೆ ತೊಡಗಿರುವ ಇವರು ಮನಸ್ಸಿನ ಪದರಗಳನ್ನು ನಯವಾಗಿ ಬಿಡಿಸುವುದರಲ್ಲಿ ತಮ್ಮ ಕೌಶಲವನ್ನು ತೋರಿ ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕತೆಗಳಗೆ ಇವರು ಬಳಸಿರುವ ತಂತ್ರವೈವಿಧ್ಯ, ಕಥಾವಸ್ತುವಿನ ನವ್ಯ ನಿರೂಪಣೆ, ಮನೋಜ್ಞ ಪದಪ್ರಯೋಗ – ಇವು ಕನ್ನಡ ಕತೆಗಳು ಜೀವಂತವಾಗಿವೆ, ಬೆಳೆಯುತ್ತಿವೆ ಎಂಬುದಕ್ಕೆ ಸಾಕ್ಷಿ, ಈ ಕತೆಗಳಲ್ಲೆಲ್ಲ ಮುಖ್ಯವಾಗಿ ಕಾಣಬರುವ ಅಂಶವೆಂದರೆ ಪರಾನುಕಂಪೆ- ವೈಯೆನ್ಕೆ
ದೊಡ್ಡ ಪ್ರಮಾಣದ ಗೆಲುವಿಗೇ ಕೈಹಾಕಬೇಕೆಂಬ ಚಟವನ್ನು ಇಟ್ಟುಕೊಳ್ಳದೆ, ತಮ್ಮ ಶಕ್ತಿಯ ಇತಿಮಿತಿಯನ್ನು ಕಂಡುಕೊಂಡು, ತಮ್ಮ ಅನುಭವಕ್ತ ಎಟುಕುವಂಥ, ಬರೆಯಲು ಗಿಟ್ಟುವಂಥ ವಸ್ತುಗಳನ್ನೇ ಆರಿಸಿಕೊಂಡು, ಗಂಟಲಲ್ಲಿ ಸಿಕ್ಕಿಕೊಳ್ಳುವಂಥ ಧೋರಪದಗಳ ವ್ಯಾಮೋಹಕ ಬಲಯಾಗದೆ. ನೇರವಾಗಿ, ಸರಳವಾಗಿ ಕತೆ ಹೇಳುವ ಕಲೆಯನ್ನು ಒಗ್ಗಿಸಿಕೊಂಡಿರುವುದು ಇವರಲ್ಲಿರುವ ಸಾಹಿತ್ಯನಿಷ್ಠೆಗೆ ಸಾಕ್ಷಿ- ಕೆ.ಸದಾಶಿವ
ಸೃಜನಶೀಲತೆಯನ್ನೇ ಮೂಲಶಕ್ತಿಯನ್ನಾಗಿ ಮಾಡಿಕೊಂಡು ನೈತಿಕತೆಯ ಕಾಳಜಿಗಳನ್ನು ಧ್ವನಿಸುವ ಈ ಕತೆಗಳನ್ನು ಕೇವಲ ನವ್ಯ ಎಂದು ಕರೆದರೆ ತಪ್ಪಾಗಬಹುದು. ಆಯಾ ಕಾಲದ ಸಾಹಿತ್ಯ ಧರ್ಮಕ್ಕನುಸಾರವಾಗಿ ಸೃಜನಶೀಲ ಮನಸ್ಸುಗಳು ಅರಳುತ್ತವೆ ಮತ್ತು ಒಮ್ಮೊಮ್ಮೆ ಆ ಸಾಹಿತ್ಯಧರ್ಮವನ್ನು ಮೀರಿ ತಮ್ಮದೇ ಆದ ಛಾಪು ಮೂಡಿಸಿ ಕಾಲದ ಮೇಲೆ ತಮ್ಮ ಹೆಜ್ಜೆಗುರುತುಗಳನ್ನು ಬಿಟ್ಟುಹೋಗುತ್ತವೆ. 'ಭೂಮಿ ಕಂಪಿಸಲಿಲ್ಲ', 'ಕೀಚಕರು' ಮತ್ತು 'ರಂಗ, ರಂಗನಾಥ, ರಂಗನಾಥಸ್ವಾಮಿ' ಇವು ಅಂಥ ಕತೆಗಳು- ಮಾಧವ ಕುಲಕರ್ಣಿ
©2024 Book Brahma Private Limited.