ಪರಿವರ್ತನೆ ನೂರ್ ಜಹಾನ್ ಅವರ ಕಥಾಸಂಕಲನವಾಗಿದೆ. ಪರಿವರ್ತನೆ ಸಂಕಲನದಲ್ಲಿರುವ ಹತ್ತೂ ಕಥೆಗಳು ಸಾಮಾನ್ಯರ ವರ್ತಮಾನದ ಇತಿಹಾಸವನ್ನು ಯಾವ ಅಲಂಕಾರಿಕ ಭಾಷೆ, ಥಳಕುಗಳಿಲ್ಲದೆ ವಾಸ್ತವ ಮಾರ್ಗದ ನಿರೂಪಣೆಯಲ್ಲಿ ತೆರೆದಿಡುತ್ತವೆ. ಇವುಗಳ ವಿನ್ಯಾಸ ಸರಳ. ನಿರೂಪಣೆ ನೇರ. ಭಾಷೆ ಸಹಜ. ಒಂದರ್ಥದಲ್ಲಿ ನಿರಾಭರಣ. ಈ ಕಥೆಗಳಲ್ಲಿ ಇರುವುದೆಂದರೆ ಬದುಕು, ಅನುಭವ ಮತ್ತು ಬದುಕಿನಲಿ ಏನು ಮಾಡಿದರೆ ಏನು ಪಡೆಯಬಹುದು ಎಂಬ ಫಲಿತ. ಇಲ್ಲಿನ ಮೊದಲ ಕಥೆ ‘ಪುಣ್ಯ’ವನ್ನೇ ತೆಗೆದುಕೊಂಡರೆ ಅದು ತೆರೆದಿಡುವ ಮೌಲ್ಯ ಇಸ್ಲಾಂ ಧರ್ಮ ಸೂಚಿಸುವ ಸಹಬಾಳ್ವೆ, ಮನುಷ್ಯಧರ್ಮದ ಅಗತ್ಯ ಮತ್ತು ಪುಣ್ಯದ ಪರಿಕಲ್ಪನೆಯ ವ್ಯಾಖ್ಯಾನ. ಇಲ್ಲಿನ ಪಾತ್ರಗಳು ಆ ನಂಬಿಕೆಗಳನ್ನೇ ಅಭಿಯಯಿಸುತ್ತವೆ. ಇಂಥವರು ಸ್ವರ್ಗದಲ್ಲಿರದೆ ಕಣ್ಣು ತೆರೆದು ನೋಡಿದರೆ ನಮ್ಮ ಸುತ್ತಮುತ್ತಲೇ ಕಾಣಿಸುತ್ತಾರೆ. ‘ಆಸರೆ’ ಎಂಬ ಕಥೆಯ ಪಾತ್ರಧಾರಿಗಳು ಅದರಲ್ಲೂ ಹೆಂಗಸರು ಕಡು ಬಡತನದಲ್ಲಿಯೇ ಘಟನೆಯಿಂದ ಜೀವನವನ್ನು ಕಟ್ಟಿಕೊಳ್ಳುವ ಜಾಣ್ಮೆಯನು ಅರಿತವರು. ಹಿಡಿ ನೆಮ್ಮದಿಗಾಗಿ ಸದಾ ಇರುವೆಗಳಂತೆ ದುಡಿಯುವ ಛಲವಂತೆಯರು. ಸಂಕಲನದ ಪರಿವರ್ತನೆ ತಮ್ಮ ಮಹತ್ವಾಕಾಂಕ್ಷೆಯ ಕಥೆ ಎಂದು ನೂರ್ ಜಹಾನ್ ನನಗೆ ಹೇಳಿದ್ದರು. ಆಸ್ಪತ್ರೆಯೊಂದರಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡುವ ರೇಶ್ಮಾಳ ಮೂಲಕ ಅನೇಕರ ಬದುಕಿನ ನೋವು-ನಲಿವುಗಳನ್ನು ಅನಾವರಣಗೊಳಿಸುವ ತಂತ್ರವನ್ನು ಹೊಂದಿರುವ ಕಥೆ. ಉಳಿದ ಕಥೆಗಳೂ ಒಂದಲ್ಲ ಒಂದು ಬಗೆಯಲ್ಲಿ ಸಾಮಾನ್ಯರ ಬದುಕಿನ ಸಂಗತಿಗಳನ್ನು ತೆರೆದಿಡುವ ಕಥೆಗಳೇ ಆಗಿವೆ. ಈ ಕಥೆಗಳನ್ನು ಓದಲು ಮುಖ್ಯ ಕಣ್ಣನ್ನು ತೇವಗೊಳಿಸಬಲ್ಲ ಭಾವುಕ ಮನಸ್ಸು ಮುಖ್ಯ. ಎಲ್ಲವನ್ನೂ ಅಳೆದು-ತೂಗಿ ಸಾಹಿತ್ಯವನ್ನು ವ್ಯಾವಹಾರಿಕ ಲೋಕದ ಸರಕಾಗಿ ಮಾಡುವ ಬುದ್ಧಿಯಲ್ಲ. ಈಗಂತೂ ಕನ್ನಡ ಸಾಹಿತ್ಯದಲ್ಲಿ ಎರಡನೆಯ ಬಗೆಯ ತಾಂಡವವೇ ನಡೆಯುತ್ತಿದೆ. ಇರಲಿ. ಎಲ್ಲ ಅಟಾಟೋಪಗಳ ನಂತರವೂ ಮನುಷ್ಯರು, ಬದುಕು, ಅವರ ಪ್ರೇಮಕಾಮ, ನೋವುನಲಿವು, ವಿಫಲತೆ-ಸಫಲತೆಗಳು ಉಳಿದೇ ಉಳಿಯುತ್ತವೆ ಎನ್ನುತ್ತಾರೆ ಕೇಶವ ಮಳಗಿ.
©2024 Book Brahma Private Limited.