'ಮೆಟ್ಟು ಹೇಳಿದ ಕಥಾ ಪ್ರಸಂಗ' ವನ್ನು ಕಥನ ಕಾವ್ಯ ಪ್ರಕಾರಕ್ಕೆ ಲೇಖಕರು ಸೇರಿಸಿದ್ದರೂ ಅದರ ವಿಸ್ತಾರವು 'ಮಹಾಕಾವ್ಯ'ದ ಮಾದರಿಯಲ್ಲಿದೆ. ಈ ಕೃತಿಯ ಲೇಖಕ ಎಂ. ಜವರಾಜ್. ಇಷ್ಟು ವಿಸ್ತಾರವಾಗಿರುವ ಕಾವ್ಯದಲ್ಲಿ ವಿಭಿನ್ನ ವ್ಯಕ್ತಿತ್ವದ 'ಪಾತ್ರ'ಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿ ಪಾತ್ರಗಳ ಬೆಳವಣಿಗೆಯ ವ್ಯಾಪ್ತಿ ಮತ್ತು ಮಿತಿಗಳಿಗಿಂತ ಮುಖ್ಯವಾಗಿ ಕೇಂದ್ರ ವಸ್ತುವನ್ನು ಸತ್ವಶಾಲಿಯಾಗಿಸಿ ನಿರೂಪಿಸುವ ಹಂಬಲ ಹಬ್ಬಿಕೊಂಡಿದೆ. ಶ್ರೇಣೀಕೃತ ಸಮಾಜದ ಶೋಷಣೆಯೇ - ವಿಶೇಷವಾಗಿ ಜಾತಿ ಪದ್ಧತಿಯ ದೌರ್ಜನ್ಯವೇ - ಈ ಕಾವ್ಯದ ಕೇಂದ್ರ ವಸ್ತುವಾಗಿದೆ. ನಮ್ಮ ಸಮಾಜದ ಸಂರಚನೆಯಲ್ಲಿ ಜಾತಿ ಮತ್ತು ವರ್ಗ ತಾರತಮ್ಯದ ಸ್ತರಗಳು ಅಂತರ್ಗತವಾಗಿ ಬೆಳೆಯುತ್ತಾ ಬಂದಿವೆ. ಈ ತಾರತಮ್ಯಕ್ಕೆ ಸಾಮಾಜಿಕ ಮತ್ತು ಆರ್ಥಿಕ ಪದ್ಧತಿಯ ಬೇರುಗಳಲ್ಲೇ ಕಾರಣಗಳಿವೆ. ಹುಟ್ಟಿನ ಕಾರಣಕ್ಕಾಗಿ ಜಾತಿ ತಾರತಮ್ಯವನ್ನು ಬೆಳೆಸಿದ ಬೇರುಗಳ ಜೊತೆಗೆ ಆಸ್ತಿ, ಹಣ, ಸಂಪತ್ತುಗಳ ಸ್ತರವೂ ಸೇರಿಕೊಂಡು ಆರ್ಥಿಕ ಅಸಮಾನತೆಯನ್ನೂ ಬೆಳೆಸುತ್ತಾ ಬರಲಾಗಿದೆ. ವಿಪರ್ಯಾಸವೆಂದರೆ ನಮ್ಮ ಜಡ ಸಂಪ್ರದಾಯದ ಬೇರುಗಳು ಅದೆಷ್ಟು ಬಲವಾಗಿವೆಯೆಂದರೆ ಆರ್ಥಿಕವಾಗಿಯಷ್ಟೇ ಅಲ್ಲ ಶೈಕ್ಷಣಿಕವಾಗಿಉನ್ನತ ಸ್ಥಿತಿಗೆ ಬಂದಿದ್ದರೂ ಅಧಿಕಾರ ಸ್ಥಾನಮಾನವಿದ್ದರೂ ಮಲಿನ ಮನಸ್ಸುಗಳು ಜಾತಿ ತಾರತಮ್ಯ ತೋರದೆ ಬಿಟ್ಟಿಲ್ಲ. ಡಾ.ಅಬೇಡ್ಕರ್ ಮತ್ತು ಡಾ.ಜಗಜೀವನರಾಮ್ ಅವರು ಅನುಭವಿಸಿದ ನೋವಿನ ಎರಡು ಪ್ರಸಂಗಗಳನ್ನು ಸಾಂಕೇತಿಕವಾಗಿ ಇಲ್ಲಿ ಉಲ್ಲೇಖಿಸಬಹುದು.
©2024 Book Brahma Private Limited.