ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪ ಅವರ ಕಥೆಗಳ ಸಮಗ್ರ ಕೃತಿ-ಕಥೆ ಅಂದರೆ ಅಷ್ಟೆ ಸಾಕೆ!. ನನ್ನೆಲ್ಲಾ ಕಥೆಗಳು ಎಂಬ ಶೀರ್ಷಿಕೆಯಡಿ ಈ ಕೃತಿಯು ಅವರ ಎಲ್ಲ ಕಥೆಗಳ ‘ಸಮಗ್ರ’ವಾಗಿದೆ. ಕೃತಿಗೆ ಬರೆದ ಬೆನ್ನುಡಿಯಲ್ಲಿ ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ‘ಬರವಣಿಗೆಯ ಮೂಲ ನೆಲೆಯಾದ ವಿಚಾರ ಹಾಗೂ ಅಸಹಾಯಕತೆಗಳು ನಮ್ಮ ನಾಡಿನ ಗ್ರಾಮೀಣ ಸಮುದಾಯಗಳ ಶಾಶ್ವತ ಸ್ಥಿತಿಯೇ ಆಗಿದೆ. ಅವರ ಬರವಣಿಗೆಯು ನಮ್ಮ ಮನಸಿನ ಮೇಲು ನಗೆಗಳನ್ನು ನಗಿಸುತ್ತಲೇ ಹೆಚ್ಚು ಸಂವೇದನಾಶೀಲವಾದ ಒಳನೆಲೆಗಳನ್ನು ವ್ಯಾಕುಲಗೊಳಿಸುವ ಸಾಮರ್ಥ್ಯವನ್ನು ಪಡೆದಿವೆ’ ಎಂದು ಪ್ರಶಂಸಿಸಿದ್ದರೆ, ವಿಮರ್ಶಕ ಜಿ.ಎಸ್. ಆಮೂರ ಅವರು ‘ಕುಂವಿ ಅವರಲ್ಲಿ ಕಥನಕ್ಕೊಗ್ಗಿದ ಪ್ರತಿಭೆ ಇದೆ. ದಟ್ಟ ಅನುಭವ, ಸೂಕ್ಷ್ಮ ವಿವರಣೆಗಳಿಂದ ಕೂಡಿದ ನಿರೂಪಣೆ, ಭಾಷೆಯ ಮೂಲಕವೇ ಪಾತ್ರಗಗಳನ್ನು ಜೀವಂತಗೊಳಿಸುವ ಕಲೆ ಯಿಂದಾಗಿ ಕುಂವೀ ಅವರು ನಮ್ಮ ಮಹತ್ವದ ಕಥೆಗಾರರಲ್ಲಿ ಒಬ್ಬರಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ. ವಿಮರ್ಶಕ ಟಿ.ಪಿ. ಅಶೋಕ ಅವರು ‘ಬಳ್ಳಾರಿ ಜಿಲ್ಲೆಯ ಪ್ರದೇಶದ ದೇಸಿ ನುಡಿಗಟ್ಟನ್ನು ಸಮರ್ಥವಾಗಿ ಬಳಸಬಲ್ಲ ಇವರ ಆ ಭಾಷೆಯಲ್ಲಿ ವಿವರಗಳನ್ನು ಗಟ್ಟಿಗೊಳಿಸುವ ಕ್ರಮವೇ ಅನನ್ಯ ಎಂದು ಅಭಿಪ್ರಾಯಪಟ್ಟರೆ, ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ‘ಲೇಖಕರು ಹೇಗೆ ಪ್ರಬುದ್ಧರಾಗುತ್ತಾರೆ ಎಂಬುದಕ್ಕೆ ಕುಂವೀ ಅವರೇ ಅತ್ಯುತ್ತ ಉದಾಹರಣೆ’ ಎಂದು ಕೃತಿಯ ಕುರಿತು ಪ್ರಶಂಸಿಸಿದ್ದಾರೆ.
©2024 Book Brahma Private Limited.