'ಬುದ್ಧನ ಕಿವಿ' ದಯಾನಂದ ಅವರ ಎರಡನೇ ಕಥಾ ಸಂಕಲನ. ಈ ಸಂಕಲನದ ಕತೆಗಳು ಸಮಕಾಲೀನ ವಾಸ್ತವ ಬದುಕಿನ ತಲ್ಲಣಗಳನ್ನು ಕತೆ ಎಂಬ ಆವರಣದ ಮೂಲಕ ಕಟ್ಟಿಕೊಡಲು ಪ್ರಯತ್ನಿಸುತ್ತವೆ. ಈ ಸಂಕಲನದ ಎದ್ದುಕಾಣುವ ಅಂಶವೆಂದರೆ ನುರಿತ ಕಥೆಗಾರನೊಬ್ಬ ನಿಭಾಯಿಸಬಹುದಾದ ಎಲ್ಲ ರೀತಿಯ ವಸ್ತುಗಳನ್ನೂ ದಯಾನಂದರು ಪ್ರಯೋಗಕ್ಕೆ ಒಡ್ಡಿರುವುದು. ವಸ್ತು ವೈವಿಧ್ಯತೆಯನ್ನು ನಿಭಾಯಿಸುವಲ್ಲಿ ಅವರು ಕೆಲವೆಡೆ ಕಥನ-ಕೃಪೆಯಿಂದ ಯಶಸ್ವಿಯೂ ಆಗಿದ್ದಾರೆ.
ಎರಡು ವಿರುದ್ಧ ಶಕ್ತಿ ಅಥವ ವಿಚಾರಗಳ ತಿಕ್ಕಾಟವನ್ನು ಕೂಡ ಈ ಕತೆಗಳಲ್ಲಿ ಕಾಣಬಹುದು. ಈ ಸಂಘರ್ಷವು ಸಮಕಾಲೀನವಾಗಿದ್ದಾಗ ಅವನ್ನು ಜತನದಿಂದ ನಿಭಾಯಿಸುವುದು ನಿಜಕ್ಕೂ ಸವಾಲಿನ ಕಸುಬು. ಅದನ್ನು ದಯಾನಂದ 'ಸರ್ವೈವಲ್ ಬೆನಿಫಿಟ್' ಕತೆಯಲ್ಲಿ ವಿಡಂಬನಾತ್ಮಕ ರೂಪಕದ ಮೂಲಕ, 'ತ್ರೀ ಪಾಯಿಂಟ್ ಫೈವ್' ಮತ್ತು 'ಬುದ್ಧನ ಕಿವಿ', 'ಬೈಬಲ್ ಬಂಪ್' ಥರದ ಕತೆಗಳಲ್ಲಿ ಚಾಕಚಕ್ಯತೆಯ ನಿರೂಪಣೆಯ ಮೂಲಕ ಬಹಳ ಸಹಜವಾಗಿ ಸಾಧಿಸಿರುವುದು ಮೆಚ್ಚುಗೆಯ ಅಂಶವಾಗಿದೆ.
'ತ್ರೀ ಪಾಯಿಂಟ್ ಫೈವ್' ಕತೆಯ ಸುನೀತಾ ಆಧುನಿಕ ವಿದ್ಯಾವಂತ ಮಹಿಳೆ. ಮನೆಗೆದ್ದು ಮಾರು ಗೆಲ್ಲುವ ಛಲವಂತಳು. ಗಂಡನನ್ನು ಗೆಲ್ಲಬೇಕು, ಪಿಎಚ್‌ಡಿಯ ಗೈಡ್‌ನನ್ನು ಗೆಲ್ಲಬೇಕು, ಕಂಪೆನಿಯ ಸಿಇಒನನ್ನು ಗೆಲ್ಲಬೇಕು. ಗೆಲ್ಲಲು ವಿದ್ಯಾಬಲ ಬೇಕು ಮತ್ತು ಆತ್ಮಬಲ ಬೇಕು. ಬದುಕಿನ ಉದ್ದಕ್ಕೂ ಲಿಂಗತಾರತಮ್ಯದ ವಿರುದ್ಧ ಹೋರಾಡುತ್ತಾ ದಣಿದು ಗೆಲ್ಲುವ ಸಾಮರ್ಥ್ಯವಿದೆ ಸುನೀತಾಳಲ್ಲಿ. ಸುನೀತಾಳ ಪಕ್ಕದಲ್ಲಿ 'ಮಡ್ಳಕ್ಕಿ' ಕತೆಯ ಜಬೀನಕ್ಕನನ್ನಿಟ್ಟು ನೋಡಬೇಕೆನಿಸುತ್ತದೆ. ಜಬೀನಕ್ಕ ಬಡವಳು, ಅಲ್ಪಸಂಖ್ಯಾತಳು, ಸರ್ಕಾರದ ಸೌಲತ್ತನ್ನು ಪಡೆಯಲು ಅರ್ಹತೆ ಉಳ್ಳವಳು. ಹಸಿರು ಕಾರ್ಡ್ ದೊರೆತರೆ ಹೊಟ್ಟೆಯ ಪಾಡು ನೀಗುತ್ತದೆ. ಸರ್ಕಾರದ ನೌಕರಸ್ಥ ವ್ಯವಸ್ಥೆಯಲ್ಲಿ ಲಂಚ ನೀಡುತ್ತಲೇ ಇದ್ದರೂ ಜಬೀನಕ್ಕನಿಗೆ ಸರಳವಾಗಿ, ನ್ಯಾಯಯುತವಾಗಿ ಹಸಿರು ಕಾರ್ಡ್ ಸಿಗಬೇಕು, ಪ್ರತಿರೋಧ ಒಡ್ಡುವ ಸಾಮರ್ಥ್ಯ ಜಬೀನಕ್ಕನಲ್ಲಿಲ್ಲ. ಜಾತಿ, ಬಡತನ ವ್ಯಕ್ತಿಯನ್ನು ಅಸಹಾಯಕನನ್ನಾಗಿ ಮಾಡುತ್ತದೆ.
ಎಂಬತ್ತರ ದಶಕದಲ್ಲಿ ವಿಜೃಂಭಿಸಿದ ಬಂಡಾಯ- ಪ್ರತಿಭಟನಾ ಕತೆಗಳು ಹಳ್ಳಿ ಕೇಂದ್ರಕ್ಕೆ ಸೀಮಿತವಾಗಿ, ಗೌಡ-ಶಾನುಭೋಗರ ಎದುರು ದಲಿತನ ಸಿಟ್ಟು ತೋರಿಸುವ ಕತೆಗಳು ರಾಶಿ ಬಂದಿವೆ. ಈ ಪರಿ ಬದಲಾದ ಸಮಾಜದಲ್ಲಿ ಅದಕ್ಕನುಗುಣವಾಗಿ ಮುಂದುವರಿಯಬೇಕಾದದ್ದಕ್ಕೆ ‘ತ್ರೀ ಪಾಯಿಂಟ್ ಫೈವ್’ ಅಂತಹ ಕತೆಗಳ ಜರೂರಿತ್ತು. ಈ ಬಗೆಯ ಮಾದರಿ ಕತೆಗಳು ಹೊಸತಲೆಮಾರಿನವರಲ್ಲಿ ಮುಂದುವರಿದಿವೆ. ಬಹುರಾಷ್ಟ್ರೀಯ ಕಂಪೆನಿಗಳ ಆಡಳಿತ ವ್ಯವಸ್ಥೆಯನ್ನು ವಿರೋಧಿಸುವ ಕತೆಗಳು ವಿರಳವಾಗಿ ಕಂಡುಬರುತ್ತವೆ.
https://avadhimag.in/%e0%b2%95%e0%b2%a4%e0%b3%86-coffee-house-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ac%e0%b3%81%e0%b2%a6%e0%b3%8d%e0%b2%a7%e0%b2%a8-%e0%b2%95%e0%b2%b5%e0%b2%bf-%e0%b2%ab%e0%b3%8b/
https://www.eedina.com/opinion/du-saraswati-opinion-about-dayanand-authors-new-book-buddas-ear-33519.html
www.alecreatives.com/books
https://beetlebookshop.com/products/%E0%B2%AC%E0%B3%81%E0%B2%A6%E0%B3%8D%E0%B2%A7%E0%B2%A8-%E0%B2%95%E0%B2%BF%E0%B2%B5%E0%B2%BF-buddana-kivi?utm_medium=product-links&utm_content=android
©2024 Book Brahma Private Limited.