ಲೇಖಕ ಡಾ. ಸಿದ್ದು ಯಾಪಲಪರವಿ ಅವರ ಕೃತಿ-ಡೋಂಟ್ ಬಿ ಹ್ಯಾಪಿ. ಕಥೆಗಾರ್ತಿ ಕಾವ್ಯಶ್ರೀ ಮಹಾಗಾoವಕರ್ ಅವರು ಈ ಕೃತಿಯ ಕುರಿತು ‘ ಚಿಂತನೆಯ ದಿಕ್ಕನ್ನೇ ಬದಲಿಸಿ ಆಲೋಚನೆಗೀಡು ಮಾಡುವ ಸಂಗತಿಗಳು ಈ ಕೃತಿಯಲ್ಲಿ ಎದುರಾಗುತ್ತವೆ. ಎರಡು ವ್ಯಕ್ತಿಗಳು ಮುಖಾಮುಖಿಯಾದಾಗ ಅಂದರೆ ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ನೋಡಿದಾಗ, ಅವರ ಮಧ್ಯೆ ಮೂಡುವ ಭಾವನೆಗಳು ಹೇಗಿರುತ್ತವೆ? ಹೇಗಿದ್ದರೆ ಸರಿ? ಹೇಗಿದ್ದರೆ ತಪ್ಪು? ಸ್ವಾನುಭವದ ಸ್ಪರ್ಶದೊಂದಿಗೆ,ಹೇಳುತ್ತಾ ಪರಿಹಾರ ಕೂಡ ತಿಳಿಸುವ ಪ್ರಯತ್ನ ಇಲ್ಲಿದೆ.
ಮನುಷ್ಯ-ಸಂಬಂಧಗಳನ್ನು ನಿಭಾವಿಸುವ ಕಲೆ ಕರಗತ ಮಾಡಿಕೊಂಡಿರಬೇಕು. ಅದು ಯಾವ ಸಂಬಂಧ,ಹೇಗೆ ನಿಭಾಯಿಸಬೇಕು ಎನ್ನುವುದನ್ನು ಮೊದಲು ಅರಿತರೆ ಮಾತ್ರ ಜಾಣತನ ಎಲ್ಲೆಲ್ಲಿ ಮಾಡುತ್ತೇವೆಂದುತಿಳಿಸುವ ಅಂಶಗಳನ್ನು ಕೃತಿಯಲ್ಲಿ ನಾವು ಗಮನಿಸುತ್ತೇವೆ. ಆಧುನಿಕ ಜೀವನ ಶೈಲಿಗೆ ಸೂಕ್ತವಾದ ಹೇಳಿಕೆ "ಸತ್ತು ನರಕ ಸೇರುವ ಬದಲು ಬದುಕಿಗೆ ಸ್ವರ್ಗ ಸೃಷ್ಟಿ ಮಾಡಿರಿ " ಕಿವಿಮಾತು ಪಲಾಯನವಾದಿಗಳಿಗಿದೆ. ನೈತಿಕ-ಅನೈತಿಕ ಅಫೇರ್ ಪದಗಳನ್ನು ನಮಗಾಗಿ ಬಳಸುವಾಗ ಮತ್ತು ಬೇರೆಯವರಿಗಾಗಿ ಬಳಸುವಾಗ ಇರುವ ವ್ಯತ್ಯಾಸವನ್ನು ಸತ್ಯದ ನೆಲೆಯಲ್ಲಿ ಮೌಲ್ಯಮಾಪನ ಮಾಡುತ್ತಾ ಮನುಷ್ಯ ಸಹಜ ಗುಣಧರ್ಮದ ವಾಸ್ತವನ್ನು ಬಿಚ್ಚಿಡುತ್ತಾರೆ. "ದೇಹ ದೇವಾಲಯಕೆ ಶಿಸ್ತು ಕಳಸ" ಓದಿದಾಗ ಬಸಣ್ಣನವರ "ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ "ಎನ್ನುವ ಮಾತು ನೆನಪಾಗುತ್ತದೆ ಒಬ್ಬ ಆಫೀಸ್ ನಲ್ಲಿ ಕೆಲಸ ಮಾಡುವ ವ್ಯಕ್ತಿ ಬೆಳಗ್ಗೆ ಎದ್ದಾಗಿನಿಂದ ಹಿಡಿದು ಮನೆಗೆ ಹಿಂದಿರುಗುವ ವರೆಗೂ ಏನೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಯಪಡಿಸಿದ್ದಾರೆ. ಹೀಗೆ ವ್ಯಕ್ತಿ, ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಇರುವ ಗುಟ್ಟನ್ನು ಬಹಳ ಸೂಕ್ಷ್ಮವಾಗಿ ಅರುಹಿದ್ದಾರೆ.
ದೇಹ ಮತ್ತು ಮನಸ್ಸು ಎರಡೂ ಒಂದಕ್ಕೊಂದು ಎಷ್ಟು ಪೂರಕ -ಪ್ರೇರಕ ಎನ್ನುವುದು ನಮಗೆ ಗೊತ್ತಿರುವುದಿಲ್ಲ. ಮನಸ್ಥಿತಿ ಕಾಪಾಡಿಕೊಂಡು ಅವಲೋಕಿಸಿ ರೂಢಿಸಿಕೊಂಡರೆ ಹೊಸತನದ ಅನುಭವ ಆಗುವುದರಲ್ಲಿ ಸಂಶಯವಿಲ್ಲ'ಎಂದಿದ್ದಾರೆ.
©2024 Book Brahma Private Limited.