ಈ ಪುಸ್ತಕದ ಆಗುವಿಕೆಗೆ ಒಂದು ಅನನ್ಯತೆ ಇದೆ ಎಂಬುದು ನನ್ನ ತಿಳಿವಳಿಕೆ. ನಮ್ಮೆಲ್ಲರಂತೆ ಮಧ್ಯಮವರ್ಗದ ಬದುಕಿನ ಏಳುಬೀಳಿನ ಹಾದಿಯಲ್ಲೇ ನಡೆಯುತ್ತಾ ಬಂದವರು ರೂಪಾ-ಗುರುಪ್ರಸಾದ್. ಆದರೆ ಬದುಕು ಕೆಲವೊಮ್ಮೆ ಯಾಕೋ ಇವರನ್ನು ಮಾತ್ರ ಏಕ್‌ದಂ ಮುಳ್ಳಿನ ಹಾದಿಗೆ ಎಳೆದೊಯ್ದು ನಿಲ್ಲಿಸಿಬಿಡುತ್ತದೆ. ಹಾಗೆಂದು ಕುಸಿದು ಕುಗ್ಗಿ ಸೋತುಹೋಗಲಿಲ್ಲ ಇವರು. ಯಾತನೆಗಳನ್ನೆಲ್ಲ ಆಪೋಶನ ತೆಗೆದುಕೊಂಡು ಮುಗುಮ್ಮಾಗಿ ನಿಲ್ಲಬಲ್ಲ ಅಸಾಮಾನ್ಯೆ ರೂಪ. ಅಸಹನೀಯ ನೋವನ್ನೂ ತಮ್ಮ ಎಂದಿನ ಶೈಲಿಯಲ್ಲಿ, ‘ಅಷ್ಟೇ, ಇನ್ನೇನಿಲ್ಲ’ ಎಂದು ಲಘುವಾಗಿಸಿಬಿಡಬಲ್ಲ ಅಗಾಧ ಧಾರಣಶಕ್ತಿ ಗುರುಪ್ರಸಾದ್‌ದ್ದು. ಇಂತಹ ಇವರಿಬ್ಬರೂ ಕಹಿಯಾಗಿಸಿಬಿಡಬೇಕಾಗಿದ್ದ ತಮ್ಮ ಬದುಕಿನ ಅನುಭವವಗಳನ್ನು ಅವಕಾಶವಾಗಿ ಸ್ವೀಕರಿಸಿದ್ದಾರೆ. ಅನುಭವದ ಒಂದು ಹನಿಯನ್ನೂ ವ್ಯರ್ಥವಾಗಿ ಹೋಗಲು ಬಿಡದೆ ವಿವೇಕದ ಚಿಪ್ಪಿನಲ್ಲಿ ಮುಚ್ಚಿಟ್ಟು ಕಾವು ಕೊಟ್ಟಿದ್ದಾರೆ. ಯಾವ ಚಿಪ್ಪಿನಲ್ಲಿ ಎಂತಹ ಮುತ್ತು ಅರಳಿ ಬಂದೀತೋ ಎಂದು ತಾಳ್ಮೆಯಿಂದ ಕಾದಿದ್ದಾರೆ. ಸಿಕ್ಕ ಮುತ್ತುಗಳನ್ನೆಲ್ಲಾ ಹುಷಾರಾಗಿ ಹೆಕ್ಕಿ ತೆಗೆದು, ಒಂದೊಂದಾಗಿ ಪೋಣಿಸಿ ‘ನಿಮ್ಮಂತೆ ನೀವಿರಿ’ ಪುಸ್ತಕವಾಗಿಸಿದ್ದಾರೆ.
ರೂಪಾ-ಗುರುಪ್ರಸಾದ್ ಅನುಭವದ ಮೂಸೆಯಿಂದ ಮೂಡಿಬಂದ ಈ ಪುಸ್ತಕ ನಮ್ಮೆಲ್ಲರ ಬದುಕಿನ ಜೊತೆ ಹಾಸುಹೊಕ್ಕಿನಂತೆ ಬೆಸೆದುಕೊಂಡುಬಿಡುವುದೇ ಒಂದು ಸೋಜಿಗ. ಇಲ್ಲಿನ ಒಂದೇ ಒಂದು ಅನುಭವವೂ ನಮಗೆ ಸಂಬಂಧವಿಲ್ಲದ್ದು ಅನ್ನಿಸುವುದೇ ಇಲ್ಲ. ಇವರ ಈ ಚಿಂತನ-ಮಂಥನಕ್ಕೆ ಎರಡು-ಮೂರು ತಲೆಮಾರುಗಳಿಗೆ ಸಲ್ಲುವ ಅನುಭವದ ಸಾಮಗ್ರಿ ಇದೆ. ಬದುಕಲ್ಲಿ ಮುಂದೆ ಸಾಗಿ ಬಂದವರಿಗೆ ತಮ್ಮ ಜೀವನದಲ್ಲಿ ಗಲಿಬಿಲಿಗೊಂಡ, ಅರ್ಥವಾಗದೆ ನಿಸ್ಸಹಾಯಕರಾಗಿ ಪರದಾಡಿದ ಸನ್ನಿವೇಶಗಳೆಲ್ಲಾ ಕಣ್ಮುಂದೆ ಬಂದು, ‘ಅಯ್ಯೋ, ನನಗೂ ಇದೇ ಅನುಭವವಾಗಿತ್ತಲ್ಲ, ನನಗ್ಯಾಕೆ ಇದೆಲ್ಲಾ ಹೊಳೆಯಲಿಲ್ಲ’ ಎಂದು ನಿಡುಸುಯ್ಯುವಂತಾಗುತ್ತದೆ. ಇಂದಿನ ಯುವಜನರಿಗೆ, ‘ಅಯ್ಯೋ, ಏನೋ ಮಾಡಲು ಹೋಗಿ ಏನೋ ಮಾಡಿಬಿಡುತ್ತಿದ್ದೆನಲ್ಲ, ಸದ್ಯ ಪಾರಾದೆ’ ಎಂದು ನಿರಾಳವಾಗುವಂತಾಗುತ್ತದೆ. ಇನ್ನೂ ಮುಂದಡಿ ಇಡಬೇಕಾದ ಮಕ್ಕಳಿಗಂತೂ ಮುಂದೆ ದೀಪದ ಬೆಳಕೇ ಪ್ರಕಾಶಿಸುತ್ತದೆ. ‘ಜೀವನದಲ್ಲಿ ಅದ್ಭುತಗಳು ಸಂಭವಿಸುವುದಿಲ್ಲ, ಜೀವನವೇ ಒಂದು ಅದ್ಭುತ ಎಂದು ಸ್ವೀಕರಿಸಿದಾಗ ನಿಮ್ಮಂತೆ ನೀವಿರಿರುತ್ತೀರಿ. ನಿಮ್ಮಂತೆ ನೀವಿದ್ದಾಗ ಆನಂದದ ಸುಖಭೋಗ ನಿಮ್ಮ ಕೈನಿಲುಕಿನಲ್ಲೇ ಸುಳಿದಾಡುತ್ತಿರುತ್ತದೆ’. ರೂಪಾ-ಗುರುಪ್ರಸಾದರ ಸ್ನೇಹಮಯ ಬರವಣಿಗೆಯ ಶೈಲಿ ಪುಸ್ತಕವನ್ನು ಕೊನೆಯವರೆಗೂ ಬಿಡದೆ ಓದಿಸಿಕೊಳ್ಳುತ್ತದೆ. ಮಾತು ಹೆಚ್ಚಾದ ತಕ್ಷಣ ಕುತೂಹಲ ಕೆರಳಿಸುವ ಕತೆಯೊಂದನ್ನು ಎಳೆದು ತರುವ ರೀತಿಯಂತೂ ಇನ್ನೂ ಖುಷಿ ಕೊಡುತ್ತದೆ. ಹೀಗೆ ವಸ್ತು, ಭಾಷೆ, ಶೈಲಿ ಎಲ್ಲವೂ ಜನಮುಖಿಯಾಗಿರುವುದೇ ಈ ಪುಸ್ತಕದ ವೈಶಿಷ್ಟ್ಯ. ಈ ಪುಸ್ತಕವನ್ನು ಓದುತ್ತಾ ಅರಿವಿಗೆ ಬಾರದಂತೆಯೇ ಓದುಗರ ಒಳಗೊಂದು ಬದಲಾವಣೆಯ ಪ್ರಕ್ರಿಯೆ ಪ್ರಾರಂಭವಾಗದಿದ್ದರೆ ಕೇಳಿ. ಇದಕ್ಕಾಗಿ ರೂಪಾ-ಗುರುಪ್ರಸಾದ್ ನಿಜಕ್ಕೂ ಅಭಿನಂದನೀಯರು.
- ವಿ. ಗಾಯತ್ರಿ ಸಂಪಾದಕರು, `ಸಹಜ ಸಾಗುವಳಿ’
‘ಜೀವನದಲ್ಲಿ ಅದ್ಭುತಗಳು ಸಂಭವಿಸುವುದಿಲ್ಲ, ಜೀವನವೇ ಒಂದು ಅದ್ಭುತ ಎಂದು ಸ್ವೀಕರಿಸಿದಾಗ ನಿಮ್ಮಂತೆ ನೀವಿರಿರುತ್ತೀರಿ. ನಿಮ್ಮಂತೆ ನೀವಿದ್ದಾಗ ಆನಂದದ ಸುಖಭೋಗ ನಿಮ್ಮ ಕೈನಿಲುಕಿನಲ್ಲೇ ಸುಳಿದಾಡುತ್ತಿರುತ್ತದೆ’
ವ್ಯಕ್ತಿತ್ವ ವಿಕಸನ ಸಾಹಿತ್ಯದ ಹೆಸರಿನಲ್ಲಿ ನಿರಂತರವಾಗಿ ಪ್ರಕಟವಾಗುತ್ತಿರುವ `ಸುಳ್ಳು’ ಮತ್ತು `ಅರೆಸತ್ಯ’ ಪುಸ್ತಕಗಳಿಗಿಂತ ಭಿನ್ನವಾಗಿರುವುದೇ ರೂಪಾ ಮತ್ತು ಗುರುಪ್ರಸಾದರ ಪುಸ್ತಕದ ವಿಶಿಷ್ಟತೆ.
ಈ ಪುಸ್ತಕ- ನಿಮ್ಮ ಬಗ್ಗೆಯಾಗಲಿ, ಜಗತ್ತಿನ ಬಗ್ಗೆಯಾಗಲಿ ಒಂದು ಸುಳ್ಳನ್ನೂ ಹೇಳುವುದಿಲ್ಲ. ಯಾವ ಚಿಲ್ಲರೆ ಭರವಸೆ, ರಂಜಕ ಸಾಂತ್ವನವನ್ನು ಕೂಡ ನೀಡುವುದಿಲ್ಲ.
ನೀವು ವಿಕಾಸಗೊಳ್ಳಬೇಕಾದರೆ ನಿಮ್ಮನ್ನು ನೀವೇ ನೋಡಿಕೊಳ್ಳಿ. ಹೊರಗಿನ ಜಗತ್ತನ್ನು ಕೂಡ ನೋಡಿ, ಸಹಜೀವಿಗಳನ್ನು ಕೂಡ ಗಮನಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತದೆ.
ನೀವು ಕಂಡದ್ದರ ಬಗ್ಗೆ ಕನಸಿಸುತ್ತಿರುವುದರ ಬಗ್ಗೆ ಸತ್ಯಕ್ಕೆ ಹತ್ತಿರವಾಗಿರಿ. ನಿಮ್ಮ ಪಯಣ ಒಂದೇ ದಿನದಲ್ಲಿ ಮುಗಿಯುವುದಿಲ್ಲ. ಗುರಿ ತಲುಪುವುದಕ್ಕಿಂತ ಮುಖ್ಯವಾದದ್ದು ಪಯಣದ ಪ್ರತಿ ಹೆಜ್ಜೆ. ಪ್ರತಿ ಹೆಜ್ಜೆ ಕಲಿಸುವ ಪಾಠ, ನೀಡುವ ಸಂತೋಷ-ತಿಳುವಳಿಕೆ ಎಂಬುದನ್ನೆಲ್ಲ ನಿಮಗೆ ಉಪದೇಶಿಸಲು ಹೋಗುವುದಿಲ್ಲ, ನೆನಪಿಸುತ್ತದೆ. ಹಾಗೆ ನೆನಪಿಸುವುದರಲ್ಲೂ ಹಠವಿಲ್ಲ. ಪ್ರೀತಿಯಿದೆ, ಕಳಕಳಿಯಿದೆ.
ನಿಮ್ಮನ್ನು ನೀವು ಪ್ರೀತಿಸುವುದೆಂದರೆ- ನಿಮ್ಮ ಬಗ್ಗೆಯೇ ಅನುಕಂಪ ಪಡುವುದಲ್ಲ; ಹಗಲುಗನಸು ಕಾಣುವುದಲ್ಲ. ನಿಮ್ಮ ಬಗ್ಗೆ, ಗುರಿಗಳ ಬಗ್ಗೆ, ಕ್ರಮಿಸುತ್ತಿರುವ ಮಾರ್ಗದ ಬಗ್ಗೆ ಸದಾ ಎಚ್ಚರದಿಂದಿರುವುದು.
ಇದನ್ನೆಲ್ಲ ಹೇಳುತ್ತಿರುವ ರೀತಿಯಿಂದಲೂ ರೂಪಾ ಮತ್ತು ಗುರುಪ್ರಸಾದ್ ಅವರ ಪುಸ್ತಕ ವಿಶಿಷ್ಟವಾಗಿದೆ. ನಿಮ್ಮ ಪಕ್ಕದಲ್ಲಿ ಕುಳಿತು ಕಷ್ಟ-ಸುಖ ಮಾತನಾಡುವವರ ನೆರೆಮನೆಯವರ ಶೈಲಿಯಲ್ಲಿ ಪುಸ್ತಕ ಇದೆ. ಸರಳ, ನೇರ ವಾಕ್ಯಗಳು ದಿನನಿತ್ಯದ ಬದುಕಿನಿಂದ ನೀಡುವ ಉದಾಹರಣೆಗಳು ಪುಸ್ತಕವನ್ನು ಓದುವ ಸಂತೋಷವನ್ನು ಹೆಚ್ಚಿಸುತ್ತದೆ; ಇನ್ನೊಬ್ಬ ಗೆಳೆಯನೊಡನೆ ಪುಸ್ತಕ ಹಂಚಿಕೊಳ್ಳಲು ಪ್ರೇರೇಪಿಸುತ್ತದೆ.
ಇಂತಹ ಆಪ್ತ ಸಂಗತಿಗಳನ್ನು ಓದುಗರಿಗೆ ನಿವೇದಿಸಲು ಬೇಕಾದ, ಎಲ್ಲರಿಗೂ ಹಿತವೆನಿಸುವಂತಹ ಕನ್ನಡದ ಶೈಲಿಯೊಂದನ್ನು ಕಂಡುಕೊAಡಿರುವುದು ರೂಪಾ ಮತ್ತು ಗುರುಪ್ರಸಾದರ ಇನ್ನೊಂದು ಹೆಗ್ಗಳಿಕೆ.
ಪುಸ್ತಕ ಓದಿದ ಮೇಲೆ ನಿಮ್ಮ¯್ಲÁಗುವ ಬದಲಾವಣೆಗಳ ಜೊತೆಗೆ ನೀವು ರೂಪಾ ಮತ್ತು ಗುರುಪ್ರಸಾದರನ್ನು ಕೂಡ ಖಂಡಿತವಾಗಿ ಅಭಿನಂದಿಸುತ್ತೀರಿ.
- ಕೆ. ಸತ್ಯನಾರಾಯಣ
ಕಥೆಗಾರ
©2024 Book Brahma Private Limited.