ಸಿಮೆಂಟ್ ಮಹಡಿಗಳಲ್ಲೇ ಕಾಲ ಕಳೆಯುವ ಜನರು ಕಾಡಿನೊಂದಿಗಿನ ಸಂಬಂಧದ ಅಂತರ ದಿನೇ ದಿನೆ ಹೆಚ್ಚಾಗುತ್ತಿದೆ. ಹಾಗಾಗಿ ಇಂದಿನ ವಿದ್ಯಾರ್ಥಿಗಳಿಗೆ, ಜನರಿಗೆ ‘ಕಾಡು - ನಾಡು’ ಇವೆರಡರ ಮಧ್ಯೆ ಒಂದು ಸೇತುವೆಯಂತೆ ಸಂಪರ್ಕ ಕಲ್ಪಿಸಿ ಪರಿಸರ ಪ್ರೇಮವನ್ನು ಬಿತ್ತಲು ಈ ಕೃತಿ ನೆರವಾಗುತ್ತದೆ. ಕಾಡಿನ ರೋಮಾಂಚನಕಾರಿ ಸಂಗತಿಗಳು ಮಕ್ಕಳಿಗೆ, ದೊಡ್ಡವರಿಗೆ ಕುತೂಹಲದೊಂದಿಗೆ ವನಸಿರಿಯ ಜ್ಞಾನವನ್ನು ಹೆಚ್ಚಿಸಬಲ್ಲುದು.
ವಿಮರ್ಶೆ(ಡಿಸೆಂಬರ್ 2013)
ನಾವಿಂದು ಪರಿಸರನಾಶದ ಬಗ್ಗೆ ಸ್ವಲ್ಪವೂ ಚಿಂತಿಸದೆ ನಮ್ಮನ್ನು ನಾವೇ ಆಂತಕಕ್ಕೀಡುಮಾಡಿಕೊಂಡಿದ್ದೇವೆ. ನಮ್ಮ ಹಿಂದಿನ ಹಿರಿಯರು ತಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಬದುಕಿನಲ್ಲಿ ಬಹಳ ತ್ಯಾಗ ಮಾಡಿ ಸುತ್ತಲ ಪರಿಸರವನ್ನು ಸುಸ್ಥಿತಿಯಲ್ಲಿರಿಸಲು ಶ್ರಮಿಸಿದ್ದಾರೆ. ಅರಣ್ಯ ಸಂರಕ್ಷಣೆಯ ಬಗ್ಗೆ ಸರಕಾರಗಳು ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಅರಣ್ಯಾಧಿಕಾರಿಗಳು ಎಷ್ಟೇ ಶ್ರಮವಹಿಸಿ ಕಾಪಾಡುವಲ್ಲಿ ಆಸಕ್ತಿ ತೋರಿದರೂ ಸಾರ್ವಜನಿಕರ ಬೆಂಬಲವಿಲ್ಲದೆ ಯಾವುದೂ ಪ್ರಯೋಜನವಾಗಿಲ್ಲ. ನಮ್ಮ ಸುತ್ತಮುತ್ತಲೂ ಕಾಡು ಬೆಟ್ಟ - ನದಿ - ಮೃಗಪಕ್ಷಿಗಳು - ಮುಂತಾಗಿ ಅಸ್ತಿತ್ವದಲ್ಲಿದ್ದರೇನೇ ನಮ್ಮದು ಪರಿಪೂರ್ಣ ಪರಿಸರ. ಅವುಗಳೊಂದಿಗೆ ಮನುಷ್ಯ ಸಂಪೂರ್ಣ ಅನುಸಂಧಾನದ ದಾರಿ ಹಿಡಿದಾಗ ನೆಮ್ಮದಿಯ ಬದುಕು ಆತನದಾಗಬಹುದು. ಈ ಪುಸ್ತಕ ಮಕ್ಕಳಿಗೆ ಸುಂದರ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಪಾಠವನ್ನು ಹೇಳುವ ಉತ್ತಮ ಕೃತಿಯಾಗಿ ರೂಪುಗೊಂಡಿದೆ. ಅರಣ್ಯ ಸಂರಕ್ಷಣೆ - ವನ್ಯಜೀವಿ ಸಂರಕ್ಷಣೆಯ ಬಗೆಗೆ ಶಿಕ್ಷಣ ನೀಡಲು ಪ್ರಕೃತಿ ಶಿಬಿರಗಳನ್ನು ಏರ್ಪಡಿಸಿ ಸಾರ್ವಜನಿಕರಿಗೆ ಇದರ ಮಹತ್ವ ತಿಳಿಸುವುದು ಇದರ ಉದ್ದೇಶ. ನಿವೃತ್ತ ಅರಣ್ಯಾಧಿಕಾರಿ ಶ್ರೀ ಕೆ. ಚಿಣ್ಣಪ್ಪ ಇದರ ಬಗ್ಗೆ ಹೆಚ್ಚು ಅರಿವು ಮೂಡಿಸುವ ಸಂಪನ್ಮೂಲ ವ್ಯಕ್ತಿ. ಇಂತಹ ಶಿಬಿರಗಳಿಗೆ ವಿದ್ಯಾರ್ಥಿಗಳನ್ನು ಆಯ್ದು ವಿವಿಧ ಅರಣ್ಯ ಪ್ರದೇಶಗಳಿಗೆ ಒಯ್ದು ಪರಿಚಯ ಮಾಡಿಸುವುದಲ್ಲದೆ ಸೈಡ್ ಶೋಗಳನ್ನು ತೋರಿಸಿ, ವರ್ಣಿಸಿ ಪರಿಸರಪ್ರೇಮವನ್ನು ಬಿತ್ತುವುದು ಮುಖ್ಯ ಕೆಲಸ. ಇಂಥ ಚಟುವಟಿಕೆಗಳನ್ನು ದಾಖಲಿಸಿ ಬಹು ಆಸಕ್ತಿಯಿಂದ ಬರಹರೂಪಕ್ಕಿಳಿಸಿದ ಶ್ರೀ ಟಿ. ಎಸ್ . ಗೋಪಾಲ್ ನಮ್ಮನ್ನು ಪರಿಸರದ ಉಳಿವಿಗಾಗಿ ಏನೇನು ಮಾಡಬಹುದೆಂಬ ಸೂಚನೆಯನ್ನು ಇಲ್ಲಿ ನೀಡಿದ್ದಾರೆ.
- ಇಂದಿರಾಕುಮಾರಿ, ಯಶವಂತಪುರ, ಬೆಂಗಳೂರು
©2024 Book Brahma Private Limited.