ಮಾನವೀಯ ಮೌಲ್ಯಗಳು, ಮತ್ತೊಬ್ಬರ ಭಾವನೆಗೆ ಮಿಡಿಯುವ, ಕಷ್ಟಕ್ಕೆ ತುಡಿಯುವ ನಿಸ್ವಾರ್ಥ ಮನೋಭಾವ, ಮತ್ತೊಬ್ಬರ ಏಳೆಗೆ ಸಂತೋಷಿಸುವ ಗುಣ ಮರೆಯಾಗುತ್ತಿರುವ ಇಂತಹ ಹೊತ್ತಿನಲ್ಲಿ ಹಲವಾರು ಮಹನೀಯರ, ಮೇರು ವ್ಯಕ್ತಿಗಳ ಅಂತಃಕರಣವನ್ನು, ಸಮುದ್ರದಲ್ಲಿ ಮುತ್ತನ್ನು ಹೆಕ್ಕಿ ತರುವಂತಹ ಅವರ ಸಮಗ್ರ ಜೀವನದಲ್ಲಿ ಯಾವುದೋ ಒಂದು ಪರಿಸ್ಥಿತಿಗೆ, ಘಟನೆಗೆ ಅವರು ಸ್ಪಂದಿಸಿದ ರೀತಿಯಲ್ಲಿಯೇ ಅವರ ಇಡೀ ವ್ಯಕ್ತಿತ್ವದ ಅನಾವರಣವಾಗುವಂತೆ ಲೇಖಕಿ ಆರಿಸಿಕೊಂಡ ಘಟನೆಗಳು ಓದುಗರ ಮನವನ್ನು ಕಲಕಿ ಅಂತರಂಗದಲ್ಲಿಯೇ ಉಳಿದುಬಿಡುತ್ತವೆ. ಕೆಲವನ್ನು ಓದುವಾಗ ಒಂದೆರಡು ಹನಿ ಕಣ್ಣೀರು, ಆನಂದಭಾಷ್ಪ ನಮಗರಿವಿಲ್ಲದೆ ಉದುರಿ ಬಿಡುತ್ತವೆ. ಇಲ್ಲಿನ ರಾಯಭಾರಿಗಳು ಒಂದೇ ವೃತ್ತಿ ಅಥವಾ ವರ್ಗಕ್ಕೆ ಸೇರಿದವರಲ್ಲ, ಸಾಹಿತಿಗಳು, ಗಾಯಕರು, ನಟರು, ರಾಜಕಾರಣಿಗಳು, ವಾಸ್ತುಶಿಲ್ಪಿಗಳು, ಸಮಾಜಸೇವಕರು, ಸಾಧಕರು, ದಾಸರು, ವೈದ್ಯರು, ಶರಣರು, ಉದಾತ್ತ ಜೀವಗಳನ್ನು ಧರೆಗೆ ತಂದ ಹೆತ್ತೊಡಲುಗಳು. ಹೀಗೆ ಅವರ ವೃತ್ತಿ, ಪ್ರವೃತ್ತಿಗಳು ಯಾವುದೇ ಆಗಿದ್ದರೂ ಅವರು ಮೊದಲು ಮಾನವರಾಗಿದ್ದರು. ಅಂತಃಕರಣದ ಸೆಲೆಯಾಗಿದ್ದರು ಎಂಬುದನ್ನು ಈ ಬರಹಗಳು ತೋರಿಸುತ್ತವೆ. ಆತ್ಮ ವಿಮರ್ಶೆಗೆ, ಆತ್ಮ ವಿಕಾಸಕ್ಕೆ ಮಾರ್ಗದರ್ಶನ ಮಾಡುವ ಈ ಲೇಖನಗಳ ವಾಚನ ಸತ್ಪಥಕ್ಕೆ ದಾರಿಯಾದರೆ ಲೇಖಕಿಯ ಶ್ರಮ ಸಾರ್ಥಕ.
©2025 Book Brahma Private Limited.