'ಸಮೃದ್ಧ ಕನ್ನಡ'ದ ಲೇಖನಗಳಲ್ಲಿ ಪ್ರಮುಖವಾಗಿ ಎರಡು ವಿಧ. ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದ ಕುರಿತಾದ್ದು ಕೆಲವು, ಮತ್ತು ಕನ್ನಡ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದ್ದು ಇನ್ನು ಕೆಲವು. ಇವೆರಡೂ ಕ್ಷೇತ್ರಗಳು ಹಿಂದಿನಿಂದಲೂ ಕವಿ ಕೆ ವಿ ತಿರುಮಲೇಶರ ಆಸಕ್ತಿ ವಿಷಯಗಳಾದ್ದರಿಂದ ಇವು ಇಲ್ಲಿ ಮರುಕಳಿಸಿವೆ.
'ಈ ಲೇಖನಗಳಲ್ಲಿ ನಾನು ತಳೆದ ನಿಲುವು, ವ್ಯಕ್ತಪಡಿಸಿದ ಅಭಿಪ್ರಾಯಗಳು ಚರ್ಚಾತೀತವಲ್ಲ. ಆದ್ದರಿಂದ ಸಂಪೂರ್ಣ ಸಮ್ಮತಿಯನ್ನು ನಾನು ನಿರೀಕ್ಷಿಸುವುದಿಲ್ಲ. ಎಲ್ಲಿ ಚಲನಶೀಲತೆಯಿದೆಯೋ ಅಲ್ಲಿ ಸಂಪೂರ್ಣ ಸಮ್ಮತಿಯಿರುವುದು ಸಾಧ್ಯವೂ ಇಲ್ಲ. ಅಲ್ಲದೆ ಇಲ್ಲಿ ವ್ಯಕ್ತಪಡಿಸಿದ ವಿಚಾರಗಳು ಪೂರ್ತಿಯಾಗಿ ನನ್ನವು ಎಂದೂ ಹೇಳಲಾರೆ, ಕೆಲವು ವಿಷಯಗಳು ದತ್ತವಾಗಿರುತ್ತವೆ, ಕೆಲವನ್ನು ನಾವು ವಿಸ್ತರಿಸುತ್ತೇವೆ, ಆವಿಷ್ಕರಿಸುತ್ತೇವೆ, ಮತ್ತು ಅವುಗಳನ್ನು ಮುಂದಿನವರು ಎತ್ತಿಕೊಳ್ಳಬಹುದು ಅಥವಾ ಕೈಬಿಡಬಹುದು. ವಿಮರ್ಶಿಸಬಹುದು, ಎಸ್ತರಿಸಬಹುದು. ಇಲ್ಲವೇ ಬದಲಾಯಿಸಬಹುದು. ಯಾವುದೇ ವಾದದಲ್ಲಿ ಪ್ರತಿಯೊಬ್ಬನೂ ತನ್ನ ವಾದವೇ ಹೆಚ್ಚು ಜನಪರ, ಪ್ರಗತಿಶೀಲ ಎಂದು ತಿಳಿದುಕೊಳ್ಳುತ್ತಾನೆ; ಇದನ್ನು ತೀರ್ಮಾನಿಸುವ ಆರಿಟ್ರೇಟರ್ ಇಲ್ಲ- ಸಂಚಲನೆಗೆ ಬಿಡುವುದಷ್ಟೆ ಸಾಧ್ಯ. ಅದಲ್ಲದಿದ್ದರೆ ಸರ್ವಾಧಿಕಾರಕ್ಕೆ ದಾರಿ ಮಾಡಿ ಕೊಟ್ಟಂತಾಗುತ್ತದೆ. ಒತ್ತಾಯದಿಂದ ಯಾವುದನ್ನೂ ಹೇರಬಾರದು. ಈ ಬರಹಗಳಲ್ಲಿ ಕೆಲವು ಪ್ರಮುಖವಾಗಿ ವ್ಯಾಕರಣಕ್ಕೆ ಸಂಬಂಧಿಸಿದವು- ಬೀಜರೂಪದ ಲೇಖನಗಳು. ಇವು ಈ ಕ್ಷೇತ್ರದಲ್ಲಿ ಆಸಕ್ತಿವಹಿಸಲು ಕನ್ನಡದ ಯುವ ಜನಾಂಗವನ್ನು ಪ್ರೇರೇಪಿಸಲಿ, ಈಗಾಗಲೇ ಈ ನಿಟ್ಟಿನಲ್ಲಿ ಇರುವವರಿಗೆ ಇನ್ನಷ್ಟು ವಿಚಾರಗಳನ್ನು ನೀಡಲಿ ಎನ್ನುವುದು ನನ್ನ ಆಶಯ' ಎನ್ನುತ್ತಾರೆ ತಿರುಮಲೇಶ್.
©2024 Book Brahma Private Limited.