ಗೀಜಗನ ಗೂಡು ಹಳದಿಯ ಬಣ್ಣದ ಗುಬ್ಬಿಯ ತೆರದಲಿ ಕಾಣುವ ಹಕ್ಕಿಯು ಗೀಜಗವು ಗೀಜಗ ಹಕ್ಕಿಯು ಗೂಡನು ಕಟ್ಟುವ ರೀತಿಯು ಜಗದಲಿ ಸೋಜಿಗವು ಗಂಡು ಗೀಜಗವು ತೆಂಗಿನ ನಾರಿನ ತೆರದಲಿ ಹುಲ್ಲನು ಸೀಳುವುದು ನಾರಿನ ಎಳೆಗಳ ಬಳೆಗಳ ತೆರದಲಿ ರೆಂಬೆಯ ಸುತ್ತಲೂ ಸುತ್ತುವುದು ಸೂಜಿಗೆ ದಾರವ ಪೋಣಿಸಿದಂತೆಯೆ ಪೋಣಿಸಿ ಗಂಟನು ಹಾಕುವುದು ಚಾಪೆಯ ತೆರದಲಿ ಮೇಲ್ಚಾವಣಿಯನು ಹೆಣೆಯುತ ಮೆಲ್ಲಗೆ ಬಿಗಿಯುವುದು ಗೂಡಿನ ಒಳಗಡೆ ಎರಡು ಕೋಣೆಯನು ಮಾಡುತ ಗೋಡೆಯ ಕಟ್ಟುವುದು ಎರಡೂ ಕೋಣೆಗೆ ಕೊಳವೆಯ ತೆರದಲಿ ರಡು ಬಾಗಿಲನಿಕ್ಕುವುದು ಒಂದು ಕೋಣೆಯಲಿ ಮೊಟ್ಟೆಯನಿಕ್ಕಲು ಹುಲ್ಲಿನ ಹಾಸಿಗೆ ಹರಡುವುದು ಹಕ್ಕಿಯ ಪುಕ್ಕವ ಆರಿಸಿ ತರುತಲಿ ಮೆತ್ತೆಯನ್ನು ಸರಿಪಡಿಸುವುದು ಕೋಣೆಯ ಒಳಗಡೆ ಕತ್ತಲು ಕಳೆಯಲು ಮಿಂಚುಹುಳವ ತಂದಿಕ್ಕುವುದು ಎಲ್ಲ ವ್ಯವಸ್ಥೆಯ ಮಾಡಿದ ನಂತರ ಸಂತಸ ಮನದಲಿ ಉಕ್ಕುವುದು ಈ ಪರಿಯಲ್ಲಿ ಗಂಡು ಗೀಜಗವು ಸುಂದರ ಗೂಡನು ಕಟ್ಟುವುದು ಗೂಡಿನ ಸೊಬಗನು ನೋಡಿದ ನಂತರ ಹೆಣ್ಣು ಗೀಜಗವು ಮೆಚ್ಚುವುದು ಗೀಜಗ ಹಕ್ಕಿಯು ಗೂಡನು ಕಟ್ಟುವ ಕಲೆಯಲಿ ತಾನೇ ಮೊದಲುಂಟು ಇಂತಹ ಕಲೆಯನು ತಿಳಿದಿರುವಂತಹ ಮಾನವ ಜಗದಲಿ ಯಾರುಂಟು?
©2024 Book Brahma Private Limited.