ಮಕ್ಕಳಿಗೆ ಕ್ಲಿಷ್ಟವಲ್ಲದ, ಯಾವ ಪ್ರದೇಶದ ಮಕ್ಕಳಾದರೂ ಸುಲಭವಾಗಿ ಓದಿ ಅರ್ಥ ಮಾಡಿಕೊಳ್ಳಬಲ್ಲ ಸರಳ ಭಾಷೆಯ ಶೈಲಿಯೊಂದನ್ನು ರಾಜಾ ಅವರು ಪಳಗಿಸಿಕೊಂಡು ಸಾರ್ಥಕವಾಗಿ ದುಡಿಸಿಕೊಂಡಿದ್ದಾರೆ. ಪದ ಬಳಕೆಯಲ್ಲಿಯೂ ಒಂದು ಹದವಿದೆ. ಪ್ರಾಸ, ಲಯಗಳ ಮೆರಗೂ ಸಹಜವಾಗಿ ಒದಗಿಬಂದಿರುವುದರಿಂದ ಈ ಪುಸ್ತಕದ ರಚನೆಗಳು ನಮ್ಮ ಮಕ್ಕಳ ಮನಗೆಲ್ಲುವುದರಲ್ಲಿ ಅನುಮಾನವಿಲ್ಲ. ಮಕ್ಕಳು ಮಾತ್ರವಲ್ಲ, ದೊಡ್ಡವರೂ ಓದಿ ಮಕ್ಕಳ ಭಾವಲೋಕದೊಳಗೆ ಇಣುಕಿ ಬರುವಂತೆ ಪ್ರೇರೇಪಿಸಬಲ್ಲ ಗುಣ ಇಲ್ಲಿನ ಕವಿತೆಗಳಿಗಿದೆ. ಹಾಗೆ ನೋಡಿದರೆ ದೊಡ್ಡವರೇ ಇಂತಹ ಪುಸ್ತಕಗಳನ್ನು ಮೊದಲು ಓದಬೇಕು. ಅವರು ಓದಿದರೆ ತಾನೆ ಮಕ್ಕಳಿಗೆ ಇಂತಹ ಪುಸ್ತಕವನ್ನು ಈ ಕಾರಣಕ್ಕೆ ಓದು ಎಂದು ತಮ್ಮ ಮಕ್ಕಳಿಗೆ ಹೇಳುವುದು! ದೊಡ್ಡವರು ಓದದಿದ್ದರೆ ಮಕ್ಕಳು ಖಂಡಿತಾ ಓದುವುದಿಲ್ಲ. ನಾವು ಓದದೆ ಮಕ್ಕಳು ಓದರೆಂದು ದೂರುವುದು ಎಷ್ಟು ಸರಿ? ರಾಜಾ ಅವರ ಈ ಕೃತಿಯನ್ನು ದೊಡ್ಡವರು-ಚಿಕ್ಕವರು ಎಲ್ಲರೂ ಓದಲಿ. ಈ ಕೃತಿಗೆ ನಮ್ಮ ನಾಡ ಮಕ್ಕಳ ಮನದಲ್ಲಿ ಜಾಗ ಪಡೆಯುವ ಶಕ್ತಿ ಖಂಡಿತ ಇದೆ. ಇಂಥ ಇನ್ನಷ್ಟು ಕೃತಿಗಳನ್ನು ರಾಜಾ ಅವರು ನೀಡುವ ಮೂಲಕ ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕಿರುವ ಬಹುದೊಡ್ಡ ಪರಂಪರೆಯನ್ನು ಮುಂದುವರೆಸುವ ಶಕ್ತಿ ರಾಜಾ ಅವರಂತಹ ಹೊಸ ತಲೆಮಾರಿನ ಲೇಖಕರಿಗೆ ಪ್ರಾಪ್ತವಾಗಲಿ. ಎಚ್.ಎಸ್. ಸತ್ಯನಾರಾಯಣ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.