ಮಳೆಯ ಹನಿಗಳನ್ನು ನೋಡುತ್ತ ನೋಡುತ್ತ ಅವನ್ನೇ ದಾರಗಳಂತೆ ಬಳಸಿ ಮುಗಿಲಿಗೆ ಏರಿ ಅಲ್ಲಿರುವ ನುಣ್ಣನೆಯ ಮೋಡದಲ್ಲಿ ಮಲಗಿ ಮೈ ಎಲ್ಲ ತಂಪಾಗಿಸಿಕೊಳ್ಳುವುದು, ಶಾಲೆಯ ಪುಸ್ತಕ ತೆರೆಯುತ್ತಿದ್ದಂತೆ ಪುಸ್ತಕದೊಳಗಿಂದ ಹಕ್ಕಿಯೊಂದು ಹೊರಬಂದು ಹಾಡು ಹೇಳುತ್ತ ಹಾಡಾಗಿ ಹಾರಿ ಹೋಗುವುದು, ಗಾಳಿ ಕಂಪನ್ನು ಹೊತ್ತು ತರುವ ಹಾಗೇ ಏನೇನೋ ತಿಂಡಿ ತಿನಿಸುಗಳನ್ನು ತಂದು ಸುರಿಯುವುದು, ಗುಡ್ಡಹತ್ತಿ ದೂರದ ಗುಡ್ಡದ ಸಾಲನ್ನು ಹಾಗೂ ಅದರ ಮೇಲಿಂದ ಹಾರಿ ಬರುತ್ತಿರುವ ಹಕ್ಕಿಗಳ ಸಾಲನ್ನು ನೋಡುತ್ತ ನಿಂತ ಬಾಲಕನಿಗೆ ಒಮ್ಮಿಂದೊಮ್ಮೆಲೇ ರೆಕ್ಕೆ ಮೂಡಿ ಹಾರಿ ಹೋಗುವುದು ಇದೆಲ್ಲ ಸಾಧ್ಯವೇ? ನಾವು ಮಕ್ಕಳ ಲೋಕಕ್ಕೆ ಇಳಿದಾಗ ಅಥವಾ ನಾವು ಮಕ್ಕಳೇ ಆದಾಗ ಇದ್ಯಾವುದೂ ಅಸಾಧ್ಯವಲ್ಲ. ಇಂತಹ ಕಲ್ಪನೆಗಳೆಲ್ಲ ನಮ್ಮೊಳಗೇ ಹುಟ್ಟಿ ಗರಿಬಿಚ್ಚಿ ಹಾರುತ್ತಲೇ ಇರುತ್ತವೆ. ಆಗ ಹಕ್ಕಿ ಹಾಡಾಗುತ್ತದೆ, ಹಾಡು ಹಕ್ಕಿಯಾಗುತ್ತದೆ. ಇದು ತಮ್ಮಣ್ಣ ಬೀಗಾರ ಅವರ ಒಂಬತ್ತನೇ ಮಕ್ಕಳ ಕವನ ಸಂಕಲನ. ಮಕ್ಕಳ ಲೋಕಕ್ಕೆ ಒಮ್ಮೆ ಪ್ರವೇಶಿಸಿದೆವೆಂದರೆ ಅಲ್ಲಿಂದ ಹೊರಬರಲು ಸುಲಭದಲ್ಲಿ ಆಗದು ಎಂದು ಅವರ ಅನಿಸಿಕೆ. ಅಷ್ಟು ಪ್ರೀತಿ, ಮುಗ್ಧತೆ ಹಾಗೂ ಖುಷಿ ಮಕ್ಕಳಲ್ಲಿದೆ. ಮಕ್ಕಳಿಗೆ ಬರೆಯುವವರು ತನ್ನ ಹೃದಯದಲ್ಲಿ ಮಗುತನ ಕಾಪಿಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ. ಯಾರಿಗೆ ಮಕ್ಕಳ ಜಗತ್ತಿನ ಸಂಬಂಧ ಇದೆಯೋ ಅವರಲ್ಲಿ ಮಗುತನದ ಆದೃತೆ ಇದ್ದೇ ಇರುತ್ತದೆ. ಇರಲಿ... ಈ ಸಂಕಲನದಲ್ಲಿ ಮಕ್ಕಳ ಸುತ್ತಲಿನ ಜಗತ್ತಿನದೇ ಆದ ಮೂವತ್ತೈದು ಕವನಗಳಿವೆ. ಇಲ್ಲಿ ಮಕ್ಕಳ ತುಂಟತನ, ಪಕೃತಿಯ ನಡುವಿನ ಬಲು ಸಹಜ ಆಟೋಟ ಎಲ್ಲ ಇಲ್ಲಿ ತುಂಬಿಕೊಂಡಿವೆ. ಹೊಸತಿನ ಪ್ರಯೋಗಗಳೂ ಇವೆ. ಮಕ್ಕಳ ಲೋಕವನ್ನು ಸೊಗಸು ಕಣ್ಣುಗಳಿಂದ ನೋಡುವ, ಸ್ವಚ್ಛಂದದಿಂದ ಕಂಡಿರಿಸುವ ಮುಕ್ತತೆ ಈ ಪುಸ್ತಕದಲ್ಲಿ ಹಾಸಿಕೊಂಡಿದೆ. ಯಾವ ಉಪದೇಶವೂ ಶಾಲೆಯ ಪಾಠವೂ ಇಲ್ಲಿಲ್ಲ. ಬೆರಗು ಹಣಕಿದೆ, ಅಚ್ಛರಿಯ ಕಣ್ಣೋಟ ಕಾದುಕೊಂಡಿವೆ. ಇಲಿಯ ಚಿತ್ರಗಳನ್ನು ಲೇಖರೇ ಬಿಡಿಸಿ ಅಂದಗೊಳಿಸಿದ್ದಾರೆ. ಮುಖಪುಟ ಸಂತೋಷ ಸಸಿಹಿತ್ಲು ಅವರದು. ಸೊಗಸಾದ ಮುಖ ಪುಟ, ಚಿತ್ರಗಳು, ಅಂದವಾದ ಮುದ್ರಣ ಪುಸ್ತಕದ ಸೊಗಸನ್ನು ಹೆಚ್ಚಿಸಿದೆ. ಹಾಡಿನ ಹಕ್ಕಿ ಎಲ್ಲರಿಗೂ ಇಷ್ಟವಾಗುವ ಪುಸ್ತಕ.
©2024 Book Brahma Private Limited.