‘ಚಿಣ್ಣರ ಲೋಕವ ತೆರೆಯೋಣ’ ಎಂಬುದು ಮಕ್ಕಳ ಕವನ ಸಂಕಲನ. ಸಾಹಿತಿ ಚೆನ್ನವೀರ ಕಣವಿ ರಚಿಸಿದ್ದಾರೆ. ನಮ್ಮ ಹಿರಿಯ ಕವಿಗಳು ಹಿರಿಯರಿಗಲ್ಲದೆ ಕಿರಿಯರಿಗೂ ತಿಳಿಯುವಂತೆ ಪದ್ಯ ಬರೆದಿದ್ದಾರೆ. ಇದು ಮಕ್ಕಳ ಕಾವ್ಯದ ಘನತೆಯನ್ನು ಪರೋಕ್ಷವಾಗಿ ಹೆಚ್ಚಿಸಬಲ್ಲದು. ಕುವೆಂಪು, ಬೇಂದ್ರೆ, ರಾಜರತ್ನಂ ಅವರ ಈ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿದ ನಂತರದ ತಲೆಮಾರಿನ ಹಿರಿಯರಲ್ಲಿ ಚೆನ್ನವೀರ ಕಣವಿಯವರು ಮುಖ್ಯರು. ನಮ್ಮ ತಲೆಮಾರಿನೊಂದಿಗೆ ನವೋದಯದ ತಲೆಮಾರನ್ನು ಸಂಬಂಧಿಸಿ ಸಂಪನ್ನವಾದ ಒಂದು ಸಂಸೃತಿಯ ಹರಿವನ್ನು ಹರಿಗಡಿಯದಂತೆ ನೋಡಿಕೊಳ್ಳುವ ಮೂಲಕ ನಮಗೆಲ್ಲ ಕಣವಿಯವರು ಒಂದು ಆದರ್ಶವಾಗಿ ಪರಿಣಮಿಸಿದ್ದಾರೆ. ಕಣವಿಯವರ ಮಕ್ಕಳ ಕವಿತೆಗಳಲ್ಲಿ ಕಾಣುವ ಸಹಜವೂ ಸರಳವೂ ಆದ ಭಾಷೆಯ ಬಳಕೆ, ಸುಲಲಿತವಾದ ಲಯದ ವಿನ್ಯಾಸ, ಸೃಷ್ಟಿಯ ಚರಾಚರಗಳಲ್ಲೆಲ್ಲ ಚೈತನ್ಯದ ಜೀವದಾಟವನ್ನು ಕಾಣಿಸುವ ಮಧುರವಾದ ಕಲ್ಪನಾಶೀಲತೆ ಅಪರೂಪದ್ದು. ಮಕ್ಕಳ ಬೆನ್ನ ಮೇಲೆ ಶಾಲೆಯ ಚೀಲದಂತೆ ಭಾರವಾಗಿ ಕೂಡದೆ ಅವರ ಹೆಗಲ ಮೇಲೆ ಹಗುರವಾಗಿ ಕೂತು ಚಿಲಿಪಿಲಿಸುವ ಈ ಕವಿತೆಗಳು, ಮಕ್ಕಳಿಗೆ ಬಣ್ಣದ ಹಕ್ಕಿಗಳಂತೆ ಅಪ್ಯಾಯಮಾನವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ’ ಎಂದು ಪುಸ್ತಕದ ಬೆನ್ನುಡಿಯಲ್ಲಿ ವಿವರಿಸಲಾಗಿದೆ.
©2024 Book Brahma Private Limited.