ಲೇಖಕ ಸಮುದ್ರವಳ್ಳಿ ವಾಸು ಅವರ ಮಕ್ಕಳ ಕಥಾಕವನ ‘ಸಿಂಗಾರಿ’. ನೀ.ಗೂ.ರಮೇಶ್ ಅವರು ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರದಿದ್ದಾರೆ. ಅವರು ಹೇಳುವಂತೆ, ವಾಸು ಅವರ ಈ ಸಂಕಲನದಲ್ಲಿ ವೈವಿಧ್ಯಮಯವಾದ ವಸ್ತುವನ್ನುಳ್ಳ ಕಥನ ಕವನಗಳಿವೆ. ಇಲ್ಲಿನ ಎಲ್ಲ ಕವನಗಳೂ ಮಕ್ಕಳಿಗಾಗಿ ಬರೆದ ಶಿಶುಕವನಗಳು. ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಚಳವಳಿ, ಆಂದೋಲನ, ಸಿದ್ಧಾಂತಗಳ ಭರದಲ್ಲಿ ಮಕ್ಕಳ ಸಾಹಿತ್ಯ ಸೊರಗಿದ್ದು ನಿಜ. ಅದನ್ನು ಸುಧಾರಿಸುವ ನಿಟ್ಟಿನಲ್ಲಿ ನವೋದಯದಿಂದ ಇಂದಿನವರೆಗೂ ಕೆಲವು ಕವಿಗಳು ಗಮನಾರ್ಹ ಪ್ರಯತ್ನವನ್ನೂ ಮಾಡಿದ್ದಾರೆ. ಆ ಸಾಲಿಗೆ ಸಮುದ್ರವಳ್ಳಿ ವಾಸು ಅವರ ಹೆಸರು ಮತ್ತೊಂದು ಸೇರ್ಪಡೆ. ಈ ಸಂಕಲನದ 'ಸಿಂಗಾರಿ' ಮತ್ತು 'ಚಿನ್ನು' ಕವನಗಳು ಪ್ರಾಣಿ ಮತ್ತು ಮಕ್ಕಳ ಪಾತ್ರಗಳ ಮೂಲಕ ಬೆಳೆಯುತ್ತವೆ. ಅಷ್ಟೇ ಅಲ್ಲ, ಪುಟ್ಟ ಸಂಗತಿಗಳನ್ನು ಆಧರಿಸಿ ಜೀವನ ಮೌಲ್ಯವೊಂದನ್ನು ನಿರೂಪಿಸಲು ಹೊರಡುತ್ತವೆ. ಸಿಂಗಾರಿ ಕವನದಲ್ಲಿ 'ಸಿಂಗ' ಎಂಬ ಬಾಲಕನನ್ನು ಸುಳ್ಳು ಆಪಾದನೆ ಹೊರಿಸಿ ಹೊಂಗೆ ಮರಕ್ಕೆ ಕಟ್ಟಿ ಥಳಿಸುವಾಗ ಅದನ್ನು ಕಂಡ ಪ್ರಕೃತಿಯ ಗಿಡ, ಮರ, ಪ್ರಾಣಿ, ಜೀವಸಂಕುಲಗಳು ಮರುಗುತ್ತವೆ. ಅವನ ನಿರಪರಾಧಿತನಕ್ಕೆ ಒದಗಿದ ಶಿಕ್ಷೆಯನ್ನು ಕಂಡು ಗೋಳಿಡುತ್ತವೆ. ಆದರೆ, ಇಂತಹ ಒಂದು ಸ್ಪಂದನೆ ಅಲ್ಲಿದ್ದ ಯಾವ ಮಾನವರಿಗೂ ಅರ್ಥವಾಗುವುದಿಲ್ಲ ಎಂಬ ಚಿತ್ರಣದ ಮೂಲಕ ಕವನ ವಿಡಂಬನೆಯ ತುತ್ತತುದಿಯನ್ನು ತಲುಪುತ್ತದೆ. ನಿಜವಾದ ಕಳ್ಳನನ್ನು ನಂಬುವ ಜನರು ಮುಗ್ಧ ಸಿಂಗನನ್ನು ನಂಬುವುದಿಲ್ಲ. ಸಮೂಹ ಸನ್ನಿಗೆ ಒಳಗಾದ ಗುಂಪಿನಲ್ಲಿ ಯಾರೋ ಒಬ್ಬರ ತಪ್ಪು ನಿರ್ಧಾರದಿಂದ ಇಡೀ ಸಮೂಹವೇ ದಾರಿತಪ್ಪುತ್ತದೆ. ಇದು ನಮ್ಮ ವ್ಯವಸ್ಥೆಯ ಬಗೆಗಿನ ವ್ಯಂಗ್ಯವೂ ಆಗಿದೆ. ಆದರೆ ಸಿಂಗನೆಂಬ ಬಾಲಕ ಮಾತು ಬರದ ಮೂಕ ಎಂಬುದನ್ನು ಕವಿತೆಯ ಕೊನೆಯಲ್ಲಿ ಹೇಳುವ ಮೂಲಕ ಕಥೆಗೆ ಉತ್ತಮ ತಿರುವನ್ನು ಕವಿ ನೀಡುತ್ತಾರೆ ಎಂಬುದಾಗಿ ಹೇಳಿದ್ದರೆ.
©2024 Book Brahma Private Limited.