ಗೋವಿಂದರೆಡ್ಡಿ ಅವರಿಗೆ ಮಕ್ಕಳ ಕಲ್ಪನೆಗೆ ಕುಮ್ಮಕ್ಕು ಕೊಡಬೇಕೆಂಬ ಉದ್ದೇಶಕ್ಕಿಂತ ಹೆಚ್ಚಾಗಿ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು, ವಾಸ್ತವ ಪ್ರಜ್ಞೆ ಬೆಳೆಸಬೇಕು ಎಂಬ ಉದ್ದೇಶವಿದೆ. ಇದೂ ಸತ್ಯವಾದ ಉದ್ದೇಶವೇ. ‘ಮರದ ಮೊರೆ’, ‘ಈರುಳ್ಳಿಯ ಹಾಡು’, ‘ಮೋಡ ಮತ್ತು ಮಳೆ’- ಮೊದಲಾದ ಪದ್ಯಗಳು ವಿಜ್ಞಾನದ ಪಾಠವನ್ನೇ ಮಕ್ಕಳಿಗೆ ಪ್ರಿಯವಾಗುವ ಪದ್ಯದ ಕುಣಿತದ ಮೂಲಕ ಮಾಡುತ್ತವೆ. ಇದು ಮೆಚ್ಚುಗೆ ಗಳಿಸುವ ಅಂಶ. ರೆಡ್ಡಿಯವರ ಪದ್ಯಗಳ ಲಯವೈವಿಧ್ಯ ಮೆಚ್ಚಬೇಕಾದ್ದು. ಒಂದು ಪದ್ಯದ ಹಾಗೆ ಇನ್ನೊಂದು ಪದ್ಯ ಇಲ್ಲ. ಮಕ್ಕಳ ಕಿವಿಗೆ ಇದು ತುಂಬಾ ಒಳ್ಳೆಯ ಅಭ್ಯಾಸ.ಕನ್ನಡ ಪದ್ಯದ ನಾನಾ ಬಗೆಯ ಲಯ, ಗತ್ತು ಮಕ್ಕಳಿಗೆ ಇದರಿಂದ ಅಭ್ಯಾಸವಾಗುತ್ತದೆ. ಮಕ್ಕಳ ಪದ್ಯಗಳ ಮಟ್ಟುಗಳಲ್ಲಿ ಕಾಣುವ ಮನಾಟನಿಯನ್ನು ರೆಡ್ಡಿಯವರ ಛಂದೋಪ್ರಯೋಗಗಳು ನಿವಾರಿಸುವಂತಿವೆ. ಭಾಷೆಯ ದೃಷ್ಟಿಯಿಂದ, ರೆಡ್ಡಿಯವರ ಮುಂದಿನ ಪದ್ಯಗಳು ಇನ್ನಷ್ಟು ಖಚಿತವಾಗುವುದು ಯುಕ್ತ. ಜೊತೆಗೆ ಕಲ್ಪನಾಂಶವೂ ಇನ್ನೂ ಹೆಚ್ಚಾಗಿ ಪದ್ಯಗಳಿಗೆ ಕೂಡಿಕೊಳ್ಳಬೇಕು. ನೇರವಾಗಿ ನೀತಿ ಹೇಳುವುದನ್ನು ಬಿಡುವುದೇ ಒಳ್ಳೆಯದು. ಹೀಗೆ ಅನೇಕ ಸಲಹೆಗಳನ್ನು ಕೊಡಬಹುದು. ಸಲಹೆಗಳನ್ನು ಕೊಡುವುದು ಸುಲಭ. ಅದನ್ನು ಆಚರಣೆಗೆ ತರುವುದು ಎಷ್ಟು ಕಷ್ಟವೆಂಬುದು ಬರೆಯುವವರಿಗೆ ಮಾತ್ರ ಗೊತ್ತು! ಕೊನೆಯಲ್ಲಿ ನಾನು ಹೇಳಬಹುದಾದ ಮಾತು ಇಷ್ಟೆ! ಈ ಕವಿತೆಗಳು ಮಕ್ಕಳಿಗೆ ಪ್ರಿಯವಾಗಲಿ...! ಏಕೆಂದರೆ ಮಕ್ಕಳಿಗಿಂತ ನಿಷ್ಠುರವಾದ ವಿರ್ಶಕರೇ ಇಲ್ಲ. ಇಷ್ಟವಾಯಿತೋ ಅವರು ತದೇಕಚಿತ್ತರಾಗಿ ಓದುತ್ತಾರೆ; ಇಷ್ಟವಾಗಲಿಲ್ಲವೋ ಪುಸ್ತಕ ಪಕ್ಕಕ್ಕಿಟ್ಟು ಆಟದ ಮೈದಾನಕ್ಕೆ ಓಡುತ್ತಾರೆ! ರೆಡ್ಡಿಯವರ ಒಂದೆರಡು ಪದ್ಯ ಆಟದ ಮೈದಾನಕ್ಕೂ ಮಕ್ಕಳ ಜತೆಗೆ ಓಡುವಂಥ ಪದ್ಯಗಳು! ಅಂಥ ಪದ್ಯ ಬರೆದದ್ದಕ್ಕಾಗಿ ಅವರಿಗೆ ಅಭಿನಂದನೆ. -ಡಾ.ಎಚ್.ಎಸ್.ವೆಂಕಟೇಶಮೂರ್ತಿ
©2024 Book Brahma Private Limited.